ಹು-ಧಾ ಸೆಂಟ್ರಲ್ ಕ್ಷೇತ್ರದ ಗೆಲುವಿಗಾಗಿ ತಿಮ್ಮಪ್ಪನ ಮೊರೆ ಹೋದ ಜೋಶಿ: ಬರಿಗಾಲಿನಲ್ಲಿ ಬೆಟ್ಟ ಹತ್ತಿದ ಕೇಂದ್ರ ಸಚಿವ
ಹುಬ್ಬಳ್ಳಿ, ಮೇ 12: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ, ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿತ್ತು. ಮೂರು ದಶಕಗಳಿಂದ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದರು. ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ವಿಚಲಿತರಾಗಿರುವ ಬಿಜೆಪಿ ನಾಯಕರು, ಹೇಗಾದರೂ ಮಾಡಿ ಮತ್ತೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಗೆಲುವು ಹಾಗೂ ಬಿಜೆಪಿ ಅಧಿಕಾರಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ತಿರುಪತಿಗೆ ತೆರಳಿರುವ ಪ್ರಹ್ಲಾದ್ ಜೋಶಿ ಬರಿಗಾಲಲ್ಲಿ ನಡೆದು ಶ್ರೀನಿವಾಸನ ದರ್ಶನ ಪಡೆದಿದ್ದಾರೆ.

ರಾಷ್ಟ್ರೀಯ ನಾಯಕರು ಹಾಗೂ ಸ್ಥಳೀಯ ನಾಯಕರ ಹೋರಾಟದ ನಂತರ ಸೆಂಟ್ರಲ್ ಕ್ಷೇತ್ರದ ಗೆಲುವಿಗಾಗಿ ಕೇಂದ್ರ ಸಚಿವರು ದೇವರ ಮೊರೆ ಹೋಗಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚುನಾವಣೆಯನ್ನು ಗಂಭೀರವಾಗಿ ತಗೆದುಕೊಂಡಿದ್ದು, ಹೀಗಾಗಿ ಕ್ಷೇತ್ರದ ಗೆಲುವಿಗಾಗಿ ಜೋಶಿ ಮೆಟ್ಟಿಲುಗಳನ್ನು ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಹೈವೋಲ್ಟೆಜ್ ಕ್ಷೇತ್ರವಾಗಿದೆ. ಬಹಳಷ್ಟು ಜಿದ್ದಾಜಿದ್ದಿನಿಂದ ಕೂಡಿದೆ. ಇದರ ಜೊತೆಗೆ ಉತ್ತರ-ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಕ್ಷೇತ್ರವನ್ನು ಬಿಜೆಪಿ ಗೆಲ್ಲಬೇಕು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮತ್ತೊಮ್ಮೆ ಕಮಲ ಅರಳಿಸಲು ಪ್ರಹ್ಲಾದ್ ಜೋಶಿ ಪಣ ತೊಟ್ಟಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಾಗಿನಿಂದಲೂ ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದರು, ಅಲ್ಲದೇ ಇದು ಸೆಮಿಫೈನಲ್ಸ್, ಮುಂದೆ ಫೈನಲ್ ಇದೆ ಎಂದಿದ್ದರು. ಈ ಮೂಲಕ ಪರೋಕ್ಷವಾಗಿಯೇ ಲೋಕಸಭಾ ಚುನಾವಣೆಯಲ್ಲಿ ಜೋಶಿ ವಿರುದ್ಧ ತೊಡೆ ತಟ್ಟುವ ಮುನ್ಸೂಚನೆಯನ್ನು ಜಗದೀಶ್ ಶೆಟ್ಟರ್ ನೀಡಿದ್ದಾರೆ. ಒಂದು ವೇಳೆ ಈ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಗೆದ್ದರೆ ಅವರ ವರ್ಚಸ್ಸು ಮತ್ತಷ್ಟು ಹೆಚ್ಚುತ್ತದೆ.
ಹೀಗಾಗಿ ಈ ಚುನಾವಣೆಯಲ್ಲಿಯೇ ಶೆಟ್ಟರ್ ಅವರನ್ನು ಸೋಲಿಸಲೇಬೇಕೆಂದು ಪ್ರಹ್ಲಾದ್ ಜೋಶಿ ಹಠಕ್ಕೆ ಬಿದ್ದು ಚುನಾವಣೆ ಎದುರಿಸಿದ್ದಾರೆ. ಒಂದು ವೇಳೆ ಶೆಟ್ಟರ್ ಗೆದ್ದರೆ ಬಿಜೆಪಿಗೆ ಬಹುದೊಡ್ಡ ಹಿನ್ನೆಡೆಯಾಗಲಿದೆ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಗೆಲುವು ಹಾಗೂ ಬಿಜೆಪಿ ಅಧಿಕಾರಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.












Click it and Unblock the Notifications