ಹುಬ್ಬಳ್ಳಿಯಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮರುನಾಮಕರಣಕ್ಕೆ ಹೆಚ್ಚಿದ ಒತ್ತಡ; ಸರ್ಕಾರಕ್ಕೆ ಕಂಟಕ ಆಗಲಿದ್ಯಾ?
ಹುಬ್ಬಳ್ಳಿಯಲ್ಲಿ ವಿಮಾಣ ನಿಲ್ದಾಣದ ಮರುನಾಮರಣದ ವಿಚಾರವಾಗಿ ಎರಡು ಸಮುದಾಯಗಳು ಸಮರಕ್ಕೆ ಇಳಿದಿವೆ. ಹಾಗಾದರೆ "ಆ" ಎರಡು ಸಮುದಾಯಗಳು ಯಾವುವು, ಮತ್ತು ಯಾವ ಹೆಸರು ಇಡಲು ಒತ್ತಯಿಸಿವೆ ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹುಬ್ಬಳ್ಳಿ, ಫೆಬ್ರವರಿ, 12: ಒಂದು ಕಡೆ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಅಂತಾ ಮರು ನಾಮಕರಣ ಮಾಡಲು ಪಾಲಿಕೆ ಮುಂದಾಗಿದೆ. ಮತ್ತೊಂದು ಕಡೆ ಹುಬ್ಬಳ್ಳಿಯಲ್ಲಿ ಸದ್ಯ ಫ್ಲೈ ಓವರ್ ಕಾಮಗಾರಿಗಾಗಿ ವಿವಿಧ ಮೂರ್ತಿಗಳ ತೆರವು ಕೂಡ ಜೋರಾಗಿದೆ. ಮತ್ತೊಂದು ಕಡೆ ಇದಕ್ಕೆ ವಿವಿಧ ಸಮುದಾಯಗಳಿಂದ ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದು, ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಪಬ್ರಲ ಎರಡು ಸಮಾಜಗಳ ಒತ್ತಡ ಬೊಮ್ಮಾಯಿ ಸರ್ಕಾರಕ್ಕೆ ಮತ್ತೊಂದು ಸವಾಲಿನ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರಿಡುವ ಪ್ರಸ್ತಾಪಗಳು ಕೇಳಿಬರುತ್ತಿವೆ. ಈಗ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶ್ರೀ ಜಗಜ್ಯೋತಿ ಬಸವೇಶ್ವರರ ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರಿಡುವ ಬಗ್ಗೆ ಕೂಗುಗಳು ಜೋರಾಗಿ ಕೇಳಿಬರುತ್ತಿವೆ. ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟ ಈ ಬಗ್ಗೆ ಬಲವಾಗಿ ಧ್ವನಿ ಎತ್ತಿದೆ.
ಬಸವಣ್ಣನವರ ಪುತ್ಥಳಿ ಸ್ಥಪಿಸುವಂತೆ ಆಗ್ರಹ
ಲಿಂಗಾಯತ ಸಮುದಾಯದ ನಿಲುವೇನು?
ವಿಶ್ವ ಖ್ಯಾತಿಯ ಸಮಾಜ ಸುಧಾರಕ ಹಾಗೂ ಸಂಸತ್ ಪರಿಕಲ್ಪನೆಯ ಶ್ರೀ ಜಗಜ್ಯೋತಿ ಬಸವಣ್ಣನವರ ಪುತ್ಥಳಿಯನ್ನು ತೆರವುಗೊಳಿಸಲಾಗಿದೆ. ಗುಲಾಬಿ ವನದಲ್ಲಿದ್ದ ಪುತ್ಥಳಿಯನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಗೇಟ್ ಬಳಿ ಸ್ಥಾಪಿಸಬೇಕು. ಮತ್ತು ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಬೇಕು. ಗುಲಾಬಿ ವನದಲ್ಲಿ ಅತೀ ವಿಸ್ತಾರವಾದ ಮತ್ತೊಂದು ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒಕ್ಕೂಟ ಆಗ್ರಹಿಸಿದೆ.

ಕುರುಬ ಸಮಾಜದವರ ಒತ್ತಾಯವೇನು?
ಇನ್ನು ಇದರ ಬೆನ್ನಲ್ಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹೆಸರು ಸಹ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂಬ ಆಗ್ರಹವನ್ನು ಅವರ ಅಭಿಮಾನಿಗಳು ಮತ್ತು ಕುರುಬ ಸಮಾಜ ಪ್ರಮುಖ ಮುಖಂಡರು ಮಾಡಿದ್ದಾರೆ. ಈ ಕುರಿತಂತೆ ಉಭಯ ಸಮಾಜಗಳು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರಿಗೂ ಮನವಿ ಸಲ್ಲಿಸಲು ಮುಂದಾಗಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಎಲ್ಲರ ಮನವಿಯನ್ನು ಮುಕ್ತವಾಗಿ ಸ್ವೀಕರಿಸಿದ್ದೇನೆ. ಏಕಕಾಲದಲ್ಲಿ ಎಲ್ಲಾ ವಿಮಾನ ನಿಲ್ದಾಣಗಳ ಹೆಸರಿಡಲು ಚಿಂತನೆ ನಡೆದಿದೆ ಎಂದಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ದೃಷ್ಟಿಕೋನದಲ್ಲಿ ರಾಜ್ಯದಲ್ಲಿ ರಸ್ತೆ, ವೃತ್ತ, ವಿಮಾನ ನಿಲ್ದಾಣಗಳ ನಾಮಕರಣ ಮತ್ತು ಮರುನಾಮಕರಣ ಮೂಲಕ ಜನರನ್ನು ಸೆಳೆಯಲು ತಂತ್ರಗಾರಿಕೆ ರೂಪಿಸಿದ್ದ ಬೊಮ್ಮಾಯಿ ಸರ್ಕಾರಕ್ಕೆ, ಹುಬ್ಬಳ್ಳಿ ವಿಮಾನ ನಿಲ್ದಾಣ ನಾಮಕರಣ ಮುಳುವಾಗುವ ಸಾಧ್ಯತೆಯಿದೆ. ಎರಡು ಪ್ರಬಲ ಸಮುದಾಯಗಳ ಒತ್ತಡವು ಸರ್ಕಾರಕ್ಕೆ ಮುಳುವಾಗಲಿದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಹಾಗೆಯೇ ಸರ್ಕಾರ ಎರಡೂ ಪ್ರಬಲ ಸಮುದಾಯದವರನ್ನು ಯಾವ ರೀತಿಯಾಗಿ ಮನವೊಲಿಸುತ್ತದೆ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications