ಈ ಬಾರಿ ಜಗದೀಶ್ ಶೆಟ್ಟರ್ ಗೆಲ್ಲುತ್ತಾರೆ: ಬಿಜೆಪಿ ಸಂಸದೆ ಮಂಗಳ ಅಂಗಡಿ
ಹುಬ್ಬಳ್ಳಿ, ಮೇ 10: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಸಂಸದೆಯಾಗಿರುವ ಮಂಗಳ ಅಂಗಡಿ ಅವರು ಹೇಳಿದ್ದಾರೆ.
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಸೇರಿ ಈಗ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಮಂಗಳ ಅಂಗಡಿ ಅವರು ದಿವಂಗತ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಪತ್ನಿಯಾಗಿದ್ದಾರೆ. ಸದ್ಯ ಬಿಜೆಪಿಯ ಸಂಸದೆಯಾಗಿದ್ದಾರೆ.

ಮಂಗಳ ಅಂಗಡಿ ಮಗಳು ಜಗದೀಶ್ ಶೆಟ್ಟರ್ ಮಗನ ಪತ್ನಿ. ಹೀಗಾಗಿ ಅವರದು ಬೀಗರ ಸಂಬಂಧ. ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಇಲ್ಲಿ ರಣತಂತ್ರ ರೂಪಿಸಿದೆ. ಶೆಟ್ಟರ್ ವಿರುದ್ಧ ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಸ್ಫರ್ಧೆ ಮಾಡುತ್ತಿದ್ದಾರೆ.
ಬುಧವಾರ ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದ ಮತಗಟ್ಟೆ ಬಳಿ ಮತದಾನ ಮಾಡಿ ಮಾತನಾಡಿರುವ ಮಂಗಳ ಅಂಗಡಿ ಅವರು ಈ ಬಾರಿ ಜಗದೀಶ್ ಶೆಟ್ಟರ್ ಅವರು ಗೆಲ್ಲುತ್ತಾರೆ. ಹಾಗೇಯೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬೆಳಗಾವಿಯಲ್ಲಿ 13 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದ್ದು, ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದರು.












Click it and Unblock the Notifications