ಕೇರಳದಲ್ಲಿ ಹೆತ್ತವರ ಗೋಳು ನೋಡಿ ಕರ್ನಾಟಕದಲ್ಲಿ ಕಣ್ಣೀರಿಟ್ಟ ಮಕ್ಕಳು
ಹುಬ್ಬಳ್ಳಿ, ಆಗಸ್ಟ್.29: ಕೇರಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದಿಂದ ಜನಜೀವನ ತತ್ತರಿಸಿದ್ದು, ಹೆತ್ತವರ ಗೋಳನ್ನು ನೋಡಿ ಕರ್ನಾಟಕದಲ್ಲಿರುವ ಕೇರಳಿಗರ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.
ಹೌದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಿವಿಧ ಕಾಲೇಜುಗಳಲ್ಲಿ ನರ್ಸಿಂಗ್, ಮೆಡಿಕಲ್, ಎಂಜಿನಿಯರಿಂಗ್ ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಸಂಪರ್ಕವಿಲ್ಲದೇ ಪರದಾಡುತ್ತಿದ್ದಾರೆ.
ಅದರಲ್ಲೂ ನಗರದ ಕೆಎಲ್ಇ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿನ ನೂರಾರು ವಿದ್ಯಾರ್ಥಿನಿಯರು ಫೀಸ್ ಕಟ್ಟಲು ದುಡ್ಡಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಫೋನ್ ಮಾಡಿದರೂ ಕೂಡ ಕೆಲ ವಿದ್ಯಾರ್ಥಿನಿಯರ ಪೋಷಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನೋವನ್ನು ತೋಡಿಕೊಂಡಿದ್ದಾರೆ.

ಪ್ರತಿ ವರ್ಷ ಕೇರಳ ವಿದ್ಯಾರ್ಥಿನಿಯರು ಹಾಸ್ಟೆಲ್ ಗಳಲ್ಲಿ ಓಣಂ ಆಚರಣೆ ಮಾಡುತ್ತಿದ್ದರು. ಆದರೆ ಕೇರಳದಲ್ಲಿ ಜನ ಸಂಕಷ್ಟದಲ್ಲಿರುವ ಕಾರಣ ಈ ಸಲ ಓಣಂ ಆಚರಣೆ ಮಾಡದಿರಲು ವಿದ್ಯಾರ್ಥಿನಿಯರು ನಿರ್ಧರಿಸಿದರು.
ಓಣಂ ಆಚರಣೆ ಬದಲು ತಮ್ಮವರಿಗಾಗಿ ನಿಧಿ ಸಂಗ್ರಹಿಸಿ ಕಳುಹಿಸುವ ಕೆಲಸ ಮಾಡಿದ್ದಾರೆ. ನಗರದ ಕೆಎಲ್ ಇ ಕಾಲೇಜಿನಲ್ಲಿ ಸುಮಾರು 130 ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳು, ಉಪನ್ಯಾಸಕರ ಜೊತೆ ಸೇರಿ ಹಣ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿ ಸಂಕಷ್ಟದಲ್ಲಿರುವ ತಮ್ಮವರಿಗೆ ನಿಧಿ ಸಂಗ್ರಹಿಸಿ ರೈಲಿನ ಮೂಲಕ ಕಳುಹಿಸಿದ್ದಾರೆ.

ಸೆಪ್ಟಂಬರ್ ಮತ್ತು ಅಕ್ಟೋಬರ್ ನಲ್ಲಿ ನರ್ಸಿಂಗ್ ವಾರ್ಷಿಕ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳು ಊರಿಗೆ ಹೋಗಲು ಆಗುತ್ತಿಲ್ಲ. ಪರೀಕ್ಷೆ ಮುಗಿದ ನಂತರ ಊರಿಗೆ ಹೋಗುವುದಾಗಿ ನಿರ್ಧರಿಸಿದ್ದು, ತಮ್ಮವರಿಗಾಗಿ ಹೆಚ್ಚಿನ ನೆರವು ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications