ರೌಡಿಗಳ ಪರೇಡ್ ನಡೆಸಿ ಖಡಕ್ ಎಚ್ಚರಿಕೆ ನೀಡಿದ ಹುಬ್ಬಳ್ಳಿ ಕಮಿಷನರೇಟ್, ಇದುವರೆಗೂ ದಾಖಲಾದ ಕ್ರೈಂ ಪ್ರಕರಣಗಳೆಷ್ಟು?
ಹುಬ್ಬಳ್ಳಿಯಲ್ಲಿ ಕಮೀಷನರೇಟ್‌ನಿಂದ ರೌಡಿಗಳ ಪರೇಡ್ ನಡೆಸಲಾಗಿದೆ. ಹಾಗಾದರೆ ಹುಬ್ಬಳ್ಳಿಯಲ್ಲಿ ಇದುವರೆಗೂ ದಾಖಲಾದ ಕ್ರೈಂ ಪ್ರಕರಣಗಳು ಎಷ್ಟು ಎಂದು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ, ಫೆಬ್ರವರಿ, 23: ಹುಬ್ಬಳ್ಳಿಯು ವಾಣಿಜ್ಯ ಚಟುವಟಿಕೆಗಳಿಂದ ತುಂಬಾ ಹೆಸರುವಾಸಿಯಾಗಿದೆ. ವ್ಯಾಪರ ವಹಿವಾಟು ಮೂಲಕ ಸಾಕಷ್ಟು ಹೆಸರು ಮಾಡಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂತಲೂ ಹೆಸರುವಾಸಿಯಾಗಿದೆ. ಆದರೆ ಇದೀಗ ನಗರದ ಎಲ್ಲೆಂದರಲ್ಲಿ ನೆತ್ತರು ಹರಿಯುತ್ತಿದೆ. ಲೆಕ್ಕವಿಲ್ಲದಷ್ಟು ಕ್ರೈಂ ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಕಮೀಷನರೇಟ್ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಮುಂದಾಗಿದೆ.
ವಾಣಿಜ್ಯನಗರಿ ಹುಬ್ಬಳ್ಳಿ ಸಾಕಷ್ಟು ವ್ಯಾಪಾರ ವಹಿವಾಟುಗಳಿಂದ ಅಂತರರಾಜ್ಯ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿದೆ. ಆದರೆ ಇದೀಗ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. 2 ವರ್ಷದಲ್ಲಿ ಅಂದಾಜು 20 ಕೊಲೆ ಆಗಿದ್ದು, 80 ಕೊಲೆಗೆ ಯತ್ನಿಸಿರುವ ಪ್ರಕರಣಗಳು ನಡೆದಿವೆ. ನೀರಿನ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ನೆತ್ತರು ಹರಿಯುತ್ತಿದ್ದು, ಜನರು ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಮತ್ತೊಂದೆಡೆ ಸಾಮಾನ್ಯ ಜನರು ಕೊಲೆ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಕೂಡ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯಲ್ಲಿ ರೌಡಿ ಪರೇಡ್
ಆಸ್ತಿ ವಿಚಾರ, ವೈಯಕ್ತಿಕ ದ್ವೇಷ, ಕುಟುಂಬ ಕಲಹ, ಪ್ರೀತಿ, ಪ್ರೇಮ ಸೇರಿದಂತೆ ಕುಲ್ಲಕ ಕಾರಣಕ್ಕೆ ಕೊಲೆ, ಕೊಲೆ ಯತ್ನ ಪ್ರಕರಣಗಳು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸ್ ಕಮೀಷನರೇಟ್ ರೌಡಿ ಪರೇಡ್ ಮೂಲಕ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಮುಂದಾಗಿದೆ. ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ರೌಡಿಶೀಟರ್‌ಗಳಿಗೆ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಗಿದೆ.
ರೌಡಿಗಳ ಚಳಿ ಬಿಡಿಸಿದ ಕಮಿಷನರೇಟ್
ಇನ್ನೂ ಹೆಚ್ಚುತ್ತಿರುವ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳಿಂದ ವಾಣಿಜ್ಯ ನಗರಿಯಲ್ಲಿ ಸಾರ್ವಜನಿಕ ಅಭದ್ರತೆ ಕಾಡುತ್ತಿದೆ. ಇತ್ತೀಚೆಗೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಯುವಕರೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಹುಬ್ಬಳ್ಳಿ ಜನರ ನಿದ್ದೆಗೆಡಿಸಿದೆ. ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಬೇಕಾದ ಪೋಷಕರೇ ಮಕ್ಕಳು ದಾರಿ ತಪ್ಪಿದರೂ ಸುಮ್ಮನಿರುವುದು ಇದಕ್ಕೆ ಮೂಲ ಕಾರಣವಾಗಿದೆ ಅಂತಲೇ ಹೇಳಬಹುದಾಗಿದೆ.

ಮದ್ಯವ್ಯಸನಿ, ಸಿಗರೇಟ್ ಹಾಗೂ ಗುಟ್ಕಾ ಕೊಡಿಸುವ ವಿಚಾರವಾಗಿ ಕಳೆದ ಆರು ತಿಂಗಳಲ್ಲಿ 8 ಕೊಲೆಗಳಾಗಿವೆ. ಇನ್ನೂ ಕುಟುಂಬ ಕಲಹ, ಪ್ರೀತಿ-ಪ್ರೇಮ ಹಾಗೂ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ಐದು ಕೊಲೆ ಪ್ರಕರಣಗಳು ದಾಖಲಾಗಿವೆ. ಸಣ್ಣಪುಟ್ಟ ವಿಚಾರಕ್ಕೂ ಸಹ ಕೊಲೆ ನಡೆಯುತ್ತಿರುವುದು ದುರಾದೃಷ್ಟಕರ ಸಂಗತಿ ಅಂತಲೇ ಹೇಳಬಹುದಾಗಿದೆ.












Click it and Unblock the Notifications