ದಾರಿತಪ್ಪಿದ ಅಷ್ಟಪಥ ರಸ್ತೆ, ನಾಗರಿಕರ ಹಿಡಿಶಾಪ
ನಗರದಲ್ಲಿ ಬಿ.ಆರ್.ಟಿ.ಎಸ್. ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ಹೊಸೂರಿನಿಂದ ಬಿ.ವಿ.ಬಿ ಕಾಲೇಜಿನವರೆಗೆ ಅಷ್ಟಪಥ ರಸ್ತೆ ನಿರ್ಮಾಣವಾಗುತ್ತಿದೆ. ಈ ಪೈಕಿ, ಬಲ ಮತ್ತು ಎಡಬದಿಯ ರಸ್ತೆ ನಿರ್ಮಾಣವಾಗಿದ್ದು, ಮಧ್ಯಭಾಗದಲ್ಲಿರುವ ಹಳೆಯ ರಸ್ತೆ ಕೆಳಭಾಗಕ
ಹುಬ್ಬಳ್ಳಿ, ಜುಲೈ 07 : ನಗರದಲ್ಲಿ ಬಿ.ಆರ್.ಟಿ.ಎಸ್. ಅಷ್ಟಪಥ ಕಾಮಗಾರಿ ನಡೆಯುತ್ತಿದ್ದು, ಅರ್ಧಂಬರ್ಧ ನಿರ್ಮಾಣ, ಅಧಿಕಾರಿಗಳ ಬೇಜವಾಬ್ದಾರಿಯುತ ಹೇಳಿಕೆಗಳಿಂದಾಗಿ ಹುಬ್ಬಳ್ಳಿಯ ನಾಗರಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ, ಹಿಡಿಶಾಪ ಹಾಕುತ್ತಿದ್ದಾರೆ.
ಇಲ್ಲಿನ ಹೊಸೂರಿನಿಂದ ಬಿ.ವಿ. ಭೂಮರೆಡ್ಡಿ ಕಾಲೇಜಿನವರೆಗೆ ಅಷ್ಟಪಥ ರಸ್ತೆ ನಿರ್ಮಾಣವಾಗುತ್ತಿದೆ. ಈ ಪೈಕಿ, ಬಲ ಮತ್ತು ಎಡಬದಿಯ ರಸ್ತೆ ನಿರ್ಮಾಣವಾಗಿದ್ದು, ಮಧ್ಯಭಾಗದಲ್ಲಿರುವ ಹಳೆಯ ರಸ್ತೆ ಕೆಳಭಾಗಕ್ಕೆ ಜರಿದಂತಾಗಿದೆ. ಈ ರಸ್ತೆಯಲ್ಲಿ ಹರಡಿರುವ ಜಲ್ಲಿ ಕಲ್ಲುಗಳಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ವಿದ್ಯಾನಗರದ ಜೆ.ಜಿ. ವಾಣಿಜ್ಯ ಕಾಲೇಜಿನ ಮುಂಭಾಗದಿಂದ ಸುಶ್ರುತ ಆಸ್ಪತ್ರೆಯವರೆಗೆ ಒಂದು ಭಾಗದಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇದು ಮೊದಲಿನ ರಸ್ತೆಗಿಂತ ಸುಮಾರು ಒಂದು ಅಡಿ ಎತ್ತರದಲ್ಲಿದೆ. ಈ ಎತ್ತರದ ರಸ್ತೆ ಕೆಳಗೆ ಹಾಕಿರುವ ಜಲ್ಲಿ ಕಲ್ಲುಗಳು ಹಳೆಯ ರಸ್ತೆಗೆ ಹರಡಿ ಕೊಂಡಿದೆ. ಜಲ್ಲಿಕಲ್ಲುಗಳಿಂದ ಬೈಕ್ ಸ್ಕಿಡ್ ಆಗಿ ಸಂಭವಿಸುವ ಅಪಘಾತಗಳು ಈ ರಸ್ತೆಯಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.
ಬಸ್‌ಗಳು ಹಾಗೂ ದೊಡ್ಡ ಲಾರಿಗಳು ಹೊಸ ರಸ್ತೆಯ ಮೇಲೆ ಚಲಿಸುತ್ತಿವೆ. ಪಕ್ಕದ ರಸ್ತೆ ತೀರಾ ಇಕ್ಕಟ್ಟಾಗಿದೆ. ಸಂಚಾರ ದಟ್ಟಣೆ ಉಂಟಾಗುವುದಲ್ಲದೆ, ಏರಿಳಿತದ ರಸ್ತೆಯಲ್ಲಿ ಸಾಗುವುದು ಕಿರಿಕಿರಿ ಎನಿಸುತ್ತದೆ ಎಂಬುದು ಇಲ್ಲಿ ಸಂಚರಿಸುವ ವಾಹನ ಸವಾರರ ಅಳಲು.

ಜಾಹೀರಾತು ಫಲಕ ಅಡ್ಡಿ
ಕಾಮಗಾರಿಗೆ ರಸ್ತೆ ಮಧ್ಯದಲ್ಲಿರುವ ಡಿವೈಡರ್ ಮತ್ತು ಅದಕ್ಕೆ ಅಳವಡಿಸಿರುವ ಜಾಹೀರಾತು ಫಲಕಗಳು ಅಡ್ಡಿಯಾಗಿವೆ ಎಂಬುದು ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆ.ಆರ್.ಡಿ.ಸಿ.ಎಲ್) ಅಧಿಕಾರಿಗಳ ಆರೋಪ.
ಇನ್ನೊಂದೆಡೆ ಈ ಜಾಹೀರಾತು ಫಲಕಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದವುಗಳಾಗಿರುವುದರಿಂದ ಅವುಗಳನ್ನು ಅವರೇ ತೆರವುಗೊಳಿಸಬೇಕು ಎಂದು ಬಿಆರ್‌ಟಿಎಸ್ ಅಧಿಕಾರಿಗಳ ವಾದ. ಆದರೆ, ಇದಕ್ಕೆ ಪಾಲಿಕೆ ಅಧಿಕಾರಿಗಳ ಪ್ರತಿಕ್ರಿಯೆ ಬೇರೆಯದ್ದೆ ಇದ್ದು, ಜಾಹೀರಾತು ವಿಷಯದಲ್ಲಿ ಕೆಲವರು ಪಾಲಿಕೆ ವಿರುದ್ಧ ಕೇಸ್ ದಾಖಲಿಸಿದ್ದು, ಸದ್ಯಕ್ಕೆ ಅವುಗಳ ತೆರವು ಕಾರ್ಯ ಅಸಾಧ್ಯವಾಗಿದ್ದು, ಈ ಬಗ್ಗೆ ಬಿಆರ್‌ಟಿಎಸ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೆಸರು ಹೇಳಲಿಚ್ಛಸದ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.
ಮೂರು ಇಲಾಖೆಗಳ ಈ ವೈರುಧ್ಯ ಹೇಳಿಕೆಗಳಿಂದ ಬೇಸತ್ತಿರುವ ಜನರು ಮಾತ್ರ ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ.












Click it and Unblock the Notifications