Breaking; ಹುಬ್ಬಳ್ಳಿ-ದೆಹಲಿ ರೈಲು ಸಂಚಾರಕ್ಕೆ ಮಂಗಳವಾರ ಚಾಲನೆ
ಹುಬ್ಬಳ್ಳಿ, ಅಕ್ಟೋಬರ್ 10; ಬಹುಬೇಡಿಕೆಯ ಹುಬ್ಬಳ್ಳಿ-ದೆಹಲಿ ರೈಲಿಗೆ ಮಂಗಳವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಚಿವರು ಪಾಲ್ಗೊಳ್ಳಲಿದ್ದಾರೆ.
ಹುಬ್ಬಳ್ಳಿ-ದೆಹಲಿ (ನಿಜಾಮುದ್ದೀನ್) ರೈಲು ಈ ಭಾಗದ ಜನರ ಬಹಳ ದಿನಗಳ ಬೇಡಿಕೆಯಾಗಿತ್ತು. ಈ ರೈಲಿನ ಮೂಲಕ ರಾಷ್ಟ್ರ ರಾಜಧಾನಿಗೆ ನೇರ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಈ ರೈಲಿನ ಮೂಲಕ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗುವ ನಿರೀಕ್ಷೆ ಇದೆ.
ಈ ರೈಲು ಕೋಪರಗಾವ್‌ನಲ್ಲಿ ನಿಲುಗಡೆ ಹೊಂದಿದೆ. ಇದರಿಂದಾಗಿ ಶಿರಡಿ ಸಾಯಿಬಾಬಾ ಭಕ್ತರಿಗೆ ಸಹ ಅನುಕೂಲವಾಗಲಿದೆ. ಹುಬ್ಬಳ್ಳಿಯಿಂದ ಹೊರಡುವ ರೈಲು ಬೆಳಗಾವಿ, ಪುಣೆ, ಅಹಮದ್ ನಗರ, ಇಟಾರ್ಸಿ, ಭೋಪಾಲ್, ಆಗ್ರಾ ಮೂಲಕ ದೆಹಲಿ ತಲುಪಲಿದೆ.

ಭಾರತೀಯ ರೈಲ್ವೆ ಕೋವಿಡ್ ಸಮಯದಲ್ಲಿ ಗೋವಾ ಲಿಂಕ್ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ 17305) ಸ್ಥಗಿತಗೊಳಿಸಿತ್ತು. ಬಳಿಕ ಹುಬ್ಬಳ್ಳಿ-ದೆಹಲಿ ನಡುವಿನ ರೈಲಿಗೆ ಬೇಡಿಕೆ ಹೆಚ್ಚಿತ್ತು.
ಸದ್ಯ ಹುಬ್ಬಳ್ಳಿ-ನಿಜಾಮುದ್ದೀನ್ ರೈಲು ವಾರಕ್ಕೊಮ್ಮೆ ಸಂಚಾರ ನಡೆಸಲಿದೆ. ರೈಲುಗಳ ವೇಳಾಪಟ್ಟಿ ಪರಿಷ್ಕರಣೆ ಮಾಡಲು ಪ್ರಯತ್ನ ನಡೆಸಲಾಗುತ್ತದೆ ಎಂದು ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಿಜಾಮುದ್ದೀನ್ ರೈಲು ನಿಲ್ದಾಣ ಸದ್ಯ ಸಂಚಾರ ದಟ್ಟಣೆಯಿಂದ ಕೂಡಿದೆ. ಪ್ರತಿದಿನದ ರೈಲಿಗೆ ಈಗ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ. ಅಲ್ಲದೇ ಜೋಡಿ ಹಳಿ ಕಾಮಗಾರಿ, ವಿದ್ಯುದೀಕರಣದ ಕಾಮಗಾರಿಯ ಕಾರಣದಿಂದ ಸದ್ಯ ವೇಳಾಪಟ್ಟಿ ಪರಿಷ್ಕರಣೆ ಕಷ್ಟ ಸಾಧ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.
ಪ್ರಹ್ಲಾದ್ ಜೋಶಿ ಭೇಟಿ; ಮಂಗಳವಾರ ಕೇಂದ್ರ ರೈಲ್ವೆ ಸಚಿವರು ಹುಬ್ಬಳ್ಳಿ-ಧಾರವಾಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಸಚಿವ ಪ್ರಹ್ಲಾದ್ ಜೋಶಿ ಭಾನುವಾರ ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ನಡೆಸಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಜನರು ಬರುತ್ತಿದ್ದು, ಎಲ್ಲಾ ರೀತಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, "ಡಿಸೆಂಬರ್ ಅಥವ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ-ಕಿತ್ತೂರು-ಬೆಳಗಾವಿ ನೇರ ರೈಲು ಮಾರ್ಗ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವ ನಿರೀಕ್ಷೆ ಇದೆ" ಎಂದರು.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿರ್ಮಾಣ ಮಾಡಿರುವ ವಿಶ್ವದ ಅತಿ ದೊಡ್ಡ ರೈಲು ಫ್ಲಾಟ್ ಫಾರ್ಮ್ಅನ್ನು ಸಹ ಡಿಸೆಂಬರ್‌ನಲ್ಲಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.












Click it and Unblock the Notifications