Karnataka Assembly Election 2023: ರಾಹುಲ್ ಗಾಂಧಿಯೂ ಚುನಾವಣಾ ಏಜೆಂಟಾ?: ಕಾಂಗ್ರೆಸ್‌ಗೆ ಸಿಎಂ ಪ್ರಶ್ನೆ
ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟಾ? ಎಂದು ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದ್ದು ಯಾರಿಗೆ ಮತ್ತು ಏಕೆ ಎಂದು ಇಲ್ಲಿ ತಿಳಿಯಿರಿ.
ಹುಬ್ಬಳ್ಳಿ, ಫೆಬ್ರವರಿ, 28: ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಚುನಾವಣಾ ಏಜೆಂಟರಂತೆ ವರ್ತಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇದಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮೋದಿ ಭೇಟಿಯಿಂದ ಕಾಂಗ್ರೆಸ್ ನಾಯಕರು ಭಯಭೀತರಾಗಿದ್ದಾರೆ. ಅನುಭವಿ ಮಾಜಿ ಸಿಎಂ ಒಬ್ಬರು ಈ ರೀತಿ ಮಾತನಾಡುವುದು ಸರಿಯಲ್ಲ. ಹಾಗಾದರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟಾ? ಎಂದು ಪ್ರಶ್ನೆ ಮಾಡಿದರು.
ಹುಬ್ಬಳ್ಳಿಯ ನಿವಾಸದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಜೆಟ್‌ನಲ್ಲಿ 7ನೇ ವೇತನ ಆಯೋಗ ಜಾರಿಗೆ ಹಣ ತೆಗೆದಿಟ್ಟಿದ್ದೇವೆ. 7ನೇ ವೇತನ ಆಯೋಗ ಜಾರಿಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಸಿದ್ಧಪಡಿಸುತ್ತಿದ್ದೇವೆ. ಮಧ್ಯಂತರ ವರದಿ ಬಂದ ಕೂಡಲೇ ಜಾರಿ ಮಾಡಲಾಗುತ್ತದೆ. 2023-24ನೇ ಸಾಲಿನಲ್ಲಿಯೇ ಇದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದರು.

ಇನ್ನೂ ಸೇವೆ ಮಾಡಬೇಕಿದೆ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿಯವರು ಯಾವ ಸಂದರ್ಭದಲ್ಲಿ ಹೇಳಿದ್ದಾರೆಯೋ ಗೊತ್ತಿಲ್ಲ. ಅವರದ್ದು ಇನ್ನೂ ನಿವೃತ್ತಿಯಾಗುವ ವಯಸ್ಸಲ್ಲ. ಇನ್ನೂ ಸೇವೆ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಇಂತವೆಲ್ಲ ನಡೆಯುತ್ತಿರುತ್ತದೆ. ಜನ ಪ್ರಬುದ್ಧರಾಗಿದ್ದು, ಎಲ್ಲವನ್ನೂ ಗಮನಿಸುತ್ತಾರೆ. ಚುನಾವಣೆಯಿಂದ ಚುನಾವಣೆಗೆ ಇನ್ನೂ ಪ್ರಬುದ್ಧರಾಗುತ್ತಿದ್ದಾರೆ. ನಾವು ಮಾತನಾಡುವಾಗ ಅದರ ಹಿಂದಿರುವ ಕಲ್ಪನೆಯೂ ಇರಬೇಕು ಎಂದರು.
ಪಕ್ಷ ಬಲವರ್ಧನೆಗೆ ತಯಾರಿ
ಈಗಾಗಲೇ ಪಕ್ಷ ಬಲವರ್ಧನೆಗೆ ಎಲ್ಲಾ ತಯಾರಿಗಳು ನಡೆಯುತ್ತಿದೆ. ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಮತ್ತೆ ಬರುತ್ತಾರೆ. ಪಕ್ಷದ ಬಲವರ್ಧನೆ ದೃಷ್ಟಿಯಿಂದ ಹಲವಾರು ನಾಯಕರು ರಾಜ್ಯಕ್ಕೆ ಬರುತ್ತಾರೆ. ದಾವಣಗೆರೆಯಲ್ಲಿ ಮಾರ್ಚ್‌ನಲ್ಲಿ ರಥಯಾತ್ರೆ ಆರಂಭಿಸಲಾಗುವುದು ಎಂದರು. ಹಾಗೆಯೇ ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾಲ್ಕು ಮಂದಿ ಗೋ ಬ್ಯಾಕ್ ಅಂದರೇ ತಲೆಕೆಡಿಸಿಕೊಳ್ಳುವುದಿಲ್ಲ. ಗೋ ಬ್ಯಾಕ್ ಅಭಿಯಾನ ಮಾಮೂಲಿಯಾಗಿದೆ ಎಂದರು.
ಯಡಿಯೂರಪ್ಪ ಡೈರಿ ಬಗ್ಗೆ ಸಿಎಂ ಹೇಳಿದ್ದೇನು?
ಯಡಿಯೂರಪ್ಪ ಜೈಲಿನಲ್ಲಿದ್ದಾಗ ಅವರು ಡೈರಿ ಬರೆದ ವಿಚಾರವಾಗಿ ಮಾತನಾಡಿ, ಅವರ ಮಗಳು ಡೈರಿ ಬಿಡುಗಡೆ ಮಾಡುವುದು ನನಗೆ ಗೊತ್ತಿಲ್ಲ ಎಂದರು. ಇನ್ನು ಹಿರಿಯ ನಾಯಕರ ಕಾಲಿಗೆ ಬಿದ್ದಿದ್ದರೆ ನಾನೂ ಸಿಎಂ ಆಗುತ್ತಿದ್ದೆ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.

ಸಿಎಂ ನಿವಾಸದ ಮುಂದೆ ಜಮಾವಣೆಗೊಂಡ ಜನ
ಇನ್ನು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿರುವ ನಿವಾಸಕ್ಕೆ ಬೆಳ್ಳಂಬೆಳಗ್ಗೆ ಆಗಮಿಸಿದ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಮೂಲಕ ಅವರಿಗೆ ಹಲವು ಭರವಸೆಗಳನ್ನು ನೀಡಿದರು. ಆದರ್ಶನಗರದಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಸಿದ ಸಿಎಂ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.
ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸೇರಿದಂತೆ ನಾಡಿನ ಅನೇಕ ಕಡೆಗಳಿಂದ ಜನರು ಮನವಿಗಳನ್ನು ಹೊತ್ತು ಸಿಎಂ ನಿವಾಸಕ್ಕೆ ಆಗಮಿಸಿದ್ದರು. ದೇವಸ್ಥಾನ ನಿರ್ಮಾಣಕ್ಕೆ ಅನುದಾನ, ಮನೆ ನಿರ್ಮಾಣಕ್ಕೆ ಅನುದಾನ, ವರ್ಗಾವಣೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಹೊತ್ತು ಬಂದಿದ್ದ ಸಾರ್ವಜನಿಕರಿಗೆ ಸಿಎಂ ಉತ್ತಮವಾಗಿ ಸ್ಪಂದಿಸಿದ್ದಾರೆ.












Click it and Unblock the Notifications