ಹುಬ್ಬಳ್ಳಿ ಗಣೇಶ ವಿಸರ್ಜನೆ: ಡಿಜೆಗೆ ಸಮಯ ಮಿತಿ, ಶಾಂತಿಯುತ ಮೆರವಣಿಗೆಗೆ ಪೊಲೀಸ್ ಕಮಿಷನರ್ ಸೂಚನೆ
ಹುಬ್ಬಳ್ಳಿ, ಸೆಪ್ಟಂಬರ್ 17: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ರಾಜ್ಯ ವಿವಿಧೆಡೆ ಗಲಾಟೆಗಳು ನಡೆದಿವೆ. ಈ ಪ್ರಯುಕ್ತ ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಇಂದು ಮಂಗಳವಾರ ಹನ್ನೊಂದನೇ ದಿನದ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ಶಾಂತಿ ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ನಗರ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಗಣೇಶ ವಿಸರ್ಜನೆ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಂದು ನೂರಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶ ವಿಸರ್ಜನೆ, ಮೆರವಣಿಗೆ ನಡೆಯಲಿವೆ. ಡಿಜೆ ಹಚ್ಚಲಾಗುತ್ತದೆ. ಈ ನಿಟ್ಟಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಸುಪ್ರಿಂ ಕೋರ್ಟ್ ನಿಯಮ ಪಾಲನೆ ಮಾಡಲಾಗುತ್ತದೆ. ಗಜಾನನ ಮಂಡಳಿಗಳು ಸೇರಿದಂತೆ ಸಾರ್ವಜನಿಕರ ಸಹಕರಿಸುವಂತೆ ಅವರು ಕರೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹನ್ನೊಂದನೇ ದಿನದ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಪ್ರತಿಷ್ಠಾಪನೆಯಂತೆ ವಿಸರ್ಜನೆಯು ಶಾಂತಿಯಿಂದ ನಡೆಯಲಿ
ಅವಳಿನಗರದಲ್ಲಿ ಈಗಾಗಲೇ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ ಮಾಡಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲಾಗಿದೆ. ಇಂದು ಗಣಪತಿ ವಿಸರ್ಜನೆ ಶಾಂತಿಯುವಾಗಿ ನಡೆಯಬೇಕು ಎಂದು ಅವರು ಸೂಚನೆ ನೀಡಿದರು.
ಮೂರು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಲ್ಲಿ, ಕೆ.ಎಸ್.ಆರ್.ಪಿ, ರ್ಯಾಪಿಡ್ ಆ್ಯಂಟಿಜನ್ ಪೋರ್ಸ್ ಸೇರಿದಂತೆ ವಿವಿಧ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ಬಹುತೇಕ ಕಡೆಯಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪಾಲಿಕೆಯಿಂದ ಅಗತ್ಯ ಕ್ರಮ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸೂಚನೆ ನೀಡಿರುವಂತೆ ಕುಡಿಯುವ ನೀರಿನ ವ್ಯವಸ್ಥೆ, ಸುರಕ್ಷತಾ ತಾಣ, ಆಂಬ್ಯುಲೆನ್ಸ್ ವ್ಯವಸ್ಥೆ ಜೊತೆಗೆ ಎಲ್ಲ ರೀತಿಯಲ್ಲಿ ಸುರಕ್ಷತಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 2.5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಪೊಲೀಸ್ ಆಯುಕ್ತು ತಿಳಿಸಿದರು.
ಡಿಜೆ ಹಚ್ಚಲು ರಾತ್ರಿ 10ರ ತನಕ ಅಷ್ಟೇ ಅವಕಾಶ
ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ಹುಬ್ಬಳ್ಳಿ ಧಾರವಾಡ ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ರಾತ್ರಿ 10 ಗಂಟೆವರೆಗೆ ಮಾತ್ರವೇ ಡಿಜೆ ಹಚ್ಚಲು ಅನುಮತಿ ನೀಡಲಾಗಿದೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಶಶಿಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಡಿಜೆಯನ್ನು ರಾತ್ರಿ ನಿಗದಿತ ಸಮಯಕ್ಕೆ ಬಂದ್ ಮಾಡುವಂತೆ ತಿಳಿಸಿದ್ದಾರೆ.
ಡಿಜೆ ಸಮಯದಲ್ಲಿ ಯಾವುದೇ ವಿಸ್ತರಣೆಗೆ ಅವಕಾಶ ಇರುವುದಿಲ್ಲ ಎಂದ ಅವರು, ಈಗಾಗಲೇ ಮಹಾಮಂಡಳಗಳು, ಸಾರ್ವಜನಿಕರು ಡಿಜೆ ಅವಧಿ ಹೆಚ್ಚಿಸಲು ಬೇಡಿಕೆ ಇಟ್ಟಿದ್ದರು. ಆದರೇ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹತ್ತು ಗಂಟೆಗೆ ಎಲ್ಲಾ ಡಿಜೆ ಕಡ್ಡಾಯವಾಗಿ ಬಂದ್ ಮಾಡುವಂತೆ ಸೂಚನೆ ನೀಡಿದ್ದೇವೆ. ಅದರಂತೆ ಬಂದ್ ಆಗಲಿವೆ ಎಂದರು.
ಇನ್ನೂ ಯಾವುದೇ ರೀತಿಯಲ್ಲಿ ಸಮಾಜಘಾತುಕ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದರೇ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ಕೊಟ್ಟರು.












Click it and Unblock the Notifications