ವರೂರು ನವಗ್ರಹ ತೀರ್ಥಕ್ಷೇತ್ರ: ಜ.15ರಿಂದ 11 ದಿನಗಳ ಉತ್ಸವ, 405ಅಡಿ ಎತ್ತರ ಪ್ರತಿಮೆ ಅನಾವರಣ, ಧಾರ್ಮಿಕ ಕಾರ್ಯಕ್ರಮಗಳು
ಹುಬ್ಬಳ್ಳಿ, ಜನವರಿ 14: ಹುಬ್ಬಳ್ಳಿ-ಧಾರವಾಡ ಮತ್ತೊಂದು ಮಹತ್ವದ ಧಾರ್ಮಿಕ ಆಚರಣೆಗೆ ಸಾಕ್ಷಿಯಾಗಲಿದೆ. ಇಲ್ಲಿನ ತಾಲೂಕಿನ ವರೂರು ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಜೈನ ತೀರ್ಥಕ್ಷೇತ್ರದಲ್ಲಿ 11 ದಿನಗಳ ಉತ್ಸವವು ಅದ್ಧೂರಿಯಾಗಿ ನಡೆಯಲಿದೆ. ನಾಳೆ ಜನವರಿ 15ರಿಂದ ಆರಂಭವಾಗಲಿದ್ದು, ಕರ್ನಾಟಕ ಸೇರಿ ವಿವಿಧ ರಾಜ್ಯಗಳ ರಾಜಪಾಲರು, ಧರ್ಮಸ್ಥಳ ವಿರೇಂದ್ರ ಹೆಗ್ಗಡೆ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಪಾಲ್ಗೊಳ್ಳಲಿದ್ದಾರೆ.
ವರೂರು ಗ್ರಾಮದ ನವಗ್ರಹ ಜೈನ ದೇವಾಲಯವು ನಾಳೆಯಿಂದ ಸಾರ್ವಜನಿಕರನ್ನು ಕೈ ಬೀಸಿ ಕರೆಯಲಿದೆ. ಈಗಾಗಲೇ ಸಿದ್ಧತೆಗಳು ಜೋರಾಗಿದ್ದು, ಅನೇಕ ಚಟುವಟಿಕೆಗಳು, ಕಾರ್ಯಕ್ರಮ ಸಮಾವೇಶ, ಗೋಷ್ಠಿಗಳಿಂದ ತುಂಬಿ ಹೋಗಲಿದೆ. ದೇಶಾದ್ಯಂತ 450 ಸ್ವಾಮೀಜಿಗಳು ಬರಲಿದ್ದು, ಲಕ್ಷಾಂತರ ಭಕ್ತರು ಪಂಚಕಲ್ಯಾಣ ಮಹೋತ್ಸವ ಕಣ್ತುಂಬಿಕೊಳ್ಳಲಿದ್ದಾರೆ. ಜೈನ ಸಂಪ್ರದಾಯ ದೇವಾಲಯ ಪ್ರತಿಷ್ಠಾಪನೆ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಇಲ್ಲಿನ ಸುಮೇರು ಬೆಟ್ಟಗಳ 405 ಅಡಿ ಎತ್ತರದ ಪ್ರತಿಕೃತಿಯ ನಿರ್ಮಾಣ ಕಾರ್ಯ ಮುಗಿದಿದೆ. ಅದರ ಉದ್ಘಾಟನೆಗೆ ಎಲ್ಲ ಸಿದ್ಧತೆ ಮಾಡಲಾಗಿದೆ. ಲಕ್ಷಾಂತರ ಜನರು ಬರಲಿದ್ದು, ಪಕ್ಕವೇ ಪುಣೆ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಇರುವ ಕಾರಣ, ಪೊಲೀಸರು, ಆಯೋಜಕರು ರಸ್ತೆ ಸಂಪರ್ಕ, ವಿದ್ಯುತ್, ಪಾರ್ಕಿಂಗ್, ವಸತಿ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಆಗಮಿಸುವ ಅತಿಥಿಗಳು, ಭಕ್ತರಿಗೆ ಹುಬ್ಬಳ್ಳಿ ಮತ್ತು ಧಾರವಾಡ ವಸತಿಗೃಹಗಳನ್ನು ಕಾಯ್ದಿರಿಸಲಾಗಿದೆ. ದೇವಾಲಯ ಪಾರ್ಶ್ವನಾಥನ ಪ್ರತಿಮೆಗೆ ಮೇಲಿಂದ ಅಭಿಷೇಕ ಮಾಡುವ ಮೂಲಕ ಕಾರ್ಯಕ್ರಮ ಕೊನೆಗೊಳ್ಳಲಿದೆ ಎಂದು ಕಾರ್ಯಕ್ರಮ ಕುರಿತು ದೇವಾಲಯದ ಮುಖ್ಯಸ್ಥ ಶ್ರೀ ಗುಣಧರನಂದಿ ಮಹಾರಾಜರು ಮಾಹಿಡಿ ನೀಡಿದರು.
ಪಾರ್ಶ್ವನಾಥರ ಜೀವನ ಚರಿತ್ರೆ ಕುರಿತು ವರ್ಚುವಲ್ ಪ್ರದರ್ಶನ ನಡೆಯಲಿದೆ. ಪಾರ್ಶ್ಚನಾಥನ ಮೇಲೆ ಲೇಸರ್ ಬೆಳಕಿನ ಮೂಲಕ ಮಸ್ತಕಾಭಿಷೇಕ ನೆರೆವೇರಿಸಲಾಗುತ್ತದೆ. ಅದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸರ್ವಧರ್ಮ ಸಭೆಗಳು ಮತ್ತು ಪ್ರಸಿದ್ಧ ನರ್ತಕರು ಮತ್ತು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಕಾರ್ಯಕ್ರಮಕ್ಕಾಗಿ 1,000 ಹವನ ಕುಂಡಗಳನ್ನು ಸ್ಥಾಪಿಸಲಾಗಿದೆ.
ವರೂರು ನವಗ್ರಹ ತೀರ್ಥದಲ್ಲಿ 09 ಜೈನ ದೇವರು ಪ್ರತಿಮೆಗಳು ತಲೆ ಎತ್ತಿವೆ. ಮಧ್ಯಕ್ಕೆ ಎತ್ತರದ ಭಗವಾನ ಪ್ರತಿಮೆ ನಿರ್ಮಿಸಲಾಗಿದೆ. ಇದು 120 ಅಡಿ ಎತ್ತರದಲ್ಲಿದೆ. ಇದು ಸ್ಥಳದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಕಾಣಿಸುತ್ತದೆ. ಹನ್ನೊಂದು ದಿನಗಳ ಈ ಆಚರಣೆ ಉತ್ತರ ಕರ್ನಾಟಕ ಭಾಗದ ಪ್ರಮುಖ ಹೆಗ್ಗುರುತಾಗಲಿದೆ.
ಕಾರ್ಯಕ್ರಮ ವೇಳೆ ಗಣರಾಜ್ಯೋತ್ಸವ ಅಚರಣೆ ಎದುರಾಗಲಿದೆ. ಜನವರಿ 26 ರಂದು ಬೆಟ್ಟಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುವುದು.












Click it and Unblock the Notifications