ಸಿಎಂ, ಡಿಸಿಎಂಗೆ ಡ್ರಿಲ್ ಮಾಡಿಸಿ: ರಾಜಕಾರಣಕ್ಕಾಗಿ ಪತ್ರ ಬರೆದರೆ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಮೇ 26: ಕರ್ನಾಟಕ ರಾಜ್ಯ ಪೊಲೀಸರು ಪ್ರತಿ ಎರಡು ಗಂಟೆಗೆ ಡ್ರೀಲ್ ಮಾಡಬೇಕು ಎಂಬ ಆದೇಶ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರಿಗೆ ಸಾಕಷ್ಟು ಒತ್ತಡ ಇದೆ ಎಂದು ವಾಸ್ತವದ ಕೆಲವು ಸ್ಥಿತಿಗಳ ಬಗ್ಗೆ ಅವರು ಮಾತನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರಿಗೆ ಡ್ರೀಲ್ ಮಾಡಿಸಬೇಕು ಎಂದು ಆದೇಶ ಕುರಿತು ಲೇವಡಿ ಮಾಡಿದರು.

ಸದ್ಯ ರಾಜ್ಯದಲ್ಲಿ ಪೊಲೀಸರ ಮೇಲೆ ಸಾಕಷ್ಟು ಒತ್ತಡ ಇದೆ. ಪೊಲೀಸರು ದೊಡ್ಡ ಒತ್ತಡದಲ್ಲಿ ಕೆಲಸ ಮಾಡಬೇಕಿದೆ.
ಔರಾಧ್ ಕರ್ ವರದಿ ಇನ್ನೂ ಜಾರಿ ಮಾಡಿಲ್ಲ. ಈ ನಡುವೆ ದಿನದಲ್ಲಿ ಎರಡು ಗಂಟೆಗೊಮ್ಮೆ ಡ್ರೀಲ್ ಮಾಡಿ ಅಂದರೆ ಅವರು ಎಲ್ಲಿಂದ ಮಾಡಬೇಕು ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನೀವು ಹೇಳಿದನ್ನು ನೋಡಿದರೆ, ಪೊಲೀಸರು ಹುಚ್ಚರ ರೀತಿಯಲ್ಲಿ ರಸ್ತೆಯಲ್ಲಿ ಓಡಾಡಬೇಕಾ?. ಹೀಗೆ ಮಾಡಿದರೆ ಜನ ಏನು ಹೇಳತ್ತಾರೆ. ಬುದ್ಧಿ ಇಲ್ಲದೇ ಏನೇನೋ ಆದೇಶ ಮಾಡುತ್ತಾರೆ ಎಂದು ಆಡಿಕೊಳ್ಳುತ್ತಾರೆ. ರಾಜ್ಯ ಸರ್ಕಾರಕ್ಕೆ ಮತಿಭ್ರಮಣೆ ಆಗಿದೆ. ಪೊಲೀಸರಿಗೆ ಹೊರಡಿಸಿರುವ ಈ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಸಿಎಂ ಪತ್ರ ಬರೆದರೆ ಪಾಸ್‌ಪೋರ್ಟ್ ರದ್ದಾಗಲ್ಲ
ಸಂಸದ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ವಿಚಾರ ಕುರಿತು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿಗೆ, ವಿದೇಶಾಂಗ ಸಚಿವರಿಗೆ ಪತ್ರ ಬರೆದು ರಾಜಕಾರಣ ಮಾಡಿದರೆ ಸಂಸದರ ಪಾಸ್‌ಪೋರ್ಟ್ ರದ್ದಾಗಲ್ಲ. ಸಿದ್ದರಾಮಯ್ಯ ಅವರು ರಾಜಕಾರಣ ಮಾಡಲೆಂದೇ ಕೇಂದ್ರಕ್ಕೆ ಬರೆದಿದ್ದಾರೆ. ಪೊಲೀಸ್ ಇಲಾಖೆ ಅಧಿಕೃತ ಮಾಹಿತಿ ನೀಡಬೇಕು, ಇಲ್ಲವೇ ಕೋರ್ಟ್ ಆದೇಶ ಇರಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಮಾಹಿತಿ ನೀಡುತ್ತಿದ್ದಂತೆ ಕೇಂದ್ರದಿಂದ ತ್ವರಿತ ಕ್ರಮ
ಅಶ್ಲೀಲ ವಿಡಿಯೋ ಪ್ರಕರಣ ಬಗ್ಗೆ SIT ಈಗ ಕೇಂದ್ರಕ್ಕೆ ಮಾಹಿತಿ ನೀಡಿದೆ. ಪ್ರಕರಣ ಬೆಳಕಿಗೆ ಬಂದು ಒಂದು ತಿಂಗಳ ಬಳಿಕ ಮೇ 21ರಂದು ಕೇಂದ್ರಕ್ಕೆ ಅಧಿಕೃತ ಮಾಹಿತಿ ನೀಡಿದೆ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕೇಂದ್ರ ಅತ್ಯಂತ ತ್ವರಿತ ಕ್ರಮ ಹೈಗೊಂಡಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಹಿತಿ ನೀಡಿದ ಮೇಲೆ 10 ದಿನಗಳ ಸಮಯ ಇರುತ್ತದೆ. ಅದರಂತೆ ಮೇ 21ಕ್ಕೆ SIT ಮಾಹಿತಿ ನೀಡುತ್ತಲೆ ಮುಂದಿನ ಕ್ರಮ ಕೈಗೊಂಡಿದೆ. ಮೇ 25ಕ್ಕೆ ಅಂದರೆ ಎರಡೇ ದಿನದಲ್ಲಿ ಆಗಲೇ ಕೇಂದ್ರ ಸರ್ಕಾರ ನೋಟಿಸ್ ಕೊಟ್ಟಿದೆ. ಕಾನೂನು ಪ್ರಕಾರ ಇನ್ನು 8 ದಿನದಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಜೋಶಿ ಸ್ಪಷ್ಟ ಪಡಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜಕಾರಣ ಮಾಡದೇ ಗಂಭೀರವಾಗಿ ಪರಿಗಣಿಸಬೇಕು. ವಿದೇಶಕ್ಕೆ ಹಾರಿರುವ ಪ್ರಜ್ವಲ್ ಅವರನ್ನು ಹಿಡಿದು ಕರೆ ತಂದು ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಇದೇ ವೇಳೆ ಅವರು ಆಗ್ರಹಿಸಿದರು.












Click it and Unblock the Notifications