Indira Canteen: ಕಾಂಗ್ರೆಸ್ ಸರ್ಕಾರದಿಂದಲೇ ಇಂದಿರಾ ಕ್ಯಾಂಟೀನ್‌ಗೆ ಬೀಗ: ಕೇಂದ್ರ ಸಚಿವ
ಹುಬ್ಬಳ್ಳಿ, ಜುಲೈ 19: ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಮಾತ್ರ ಬಡವರ ಪರ, ಪರಿಶಿಷ್ಟರ ಪರ ಎನ್ನುತ್ತ ಬಣ್ಣ ಬಣ್ಣದ ಕತೆ ಕಟ್ಟುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಇಂದಿರಾ ಕ್ಯಾಂಟೀನ್ ಸೇರಿದಂತೆ ರಾಜ್ಯ ಸರ್ಕಾರದ ಆಡಳಿತದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಪೋಸ್ಟ್ ಮಾಡಿರುವ ಪ್ರಹ್ಲಾದ್ ಜೋಶಿಯವರು, ಕಾಂಗ್ರೆಸ್ ಅನ್ನು ದೂರಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ನ್ ನಿಜವಾಗಿ ಬಡವರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ. ಚುನಾವಣೆ ವೇಳೆ ಮಾತ್ರ ಅವರನ್ನು ಓಲೈಸಿಕೊಳ್ಳಲು ಬಣ್ಣ ಬಣ್ಣದ ಕಥೆ ಕಟ್ಟಿ ರಾಜಕಾರಣ ಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ.

ಇಂದಿರಾ ಕ್ಯಾಂಟಿನ್ ತಾನೇ ಮುಚ್ಚುತ್ತಿದೆ ಕಾಂಗ್ರೆಸ್
ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ಬಿಜೆಪಿ ಅಲ್ಲ, ಈಗ ಕಾಂಗ್ರೆಸ್ ಸರ್ಕಾರವೇ ಮುಚ್ಚುತ್ತಿದೆ. ಬಡವರು ಮತ್ತು ಶ್ರಮಿಕ ವರ್ಗದವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಬಿಜೆಪಿ ಸರಕಾರದ ಅವಧಿಯಲ್ಲಿ ನಾವು ಮುಚ್ಚಿಸಲು ಹೊರಟಿದ್ದೇವೆಂದು ಆಗ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿತ್ತು. ಆದರೆ, ಈಗ ಕಾಂಗ್ರೆಸ್ ಸರ್ಕಾರವೇ ಮುಚ್ಚಲು ಹೊರಟಿದೆ ಎಂದು ಜೋಶಿ ಆಪಾದಿಸಿದರು.
ಗ್ಯಾರಂಟಿ ಯೋಜನೆ ನಿಭಾಯಿಸಲಾಗದೆ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿದ್ದ ಧನಕ್ಕೆ ಕೈ ಹಾಕಿದ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್ ಗಳಿಗೆ ಬೀಗ ಹಾಕುತ್ತಿದೆ ಎಂದು ಹೇಳಿದ್ದಾರೆ.
47 ಕೋಟಿ ರೂ. ಬಿಲ್ ಪಾವತಿಸಿಲ್ಲ
ಇಂದಿರಾ ಕ್ಯಾಂಟಿನ್ ಗಳಿಗೆ ಕಳೆದೊಂದು ವರ್ಷದಿಂದ ಆಹಾರ ಪೂರೈಸುತ್ತಿದ್ದ ಗುತ್ತಿಗೆದಾರರಿಗೆ ಬರೋಬ್ಬರಿ 47 ಕೋಟಿ ರೂ. ಬಿಲ್ ಪಾವತಿಸಲಾಗದೆ ಬಾಗಿಲು ಮುಚ್ಚಿಸುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ನಾಯಕರು ತಾವು ಬಡವರ ಪರ ಎನ್ನುತ್ತಾರೆ ಹೊರತು ಮಾತಲ್ಲಿ ಹೇಳಿದ್ದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಆ ಇಚ್ಛಾಸಕ್ತಿ ಮುಖ್ಯಮಂತ್ರಿ ಅವರಿಗಿಲ್ಲ ಎಂದು ಆರೋಪಿಸಿ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಹೊಸ ಇಂದಿರಾ ಕ್ಯಾಂಟಿನ್ ಘೋಷಿಸಿದ್ದ ಸರ್ಕಾರ
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನಷ್ಟು ಇಂದಿರಾ ಕ್ಯಾಂಟಿನ್ ನಿರ್ಮಿಸುವುದಾಗಿ, ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಸರ್ಕಾರ ತಿಳಿಸಿತ್ತು. ಅಲ್ಲದೇ ರಾಗಿಮುದ್ದೆ ಇನ್ನಿತರ ಮೆನು ಲಿಸ್ಟ್ ಹೆಚ್ಚಿಸಿಕೊಂಡಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಪ್ರಸ್ತಾವನೆ ಸಹ ಬಂದಿತ್ತು. ಇದರ ಬೆನ್ನಲ್ಲೆ ಬಿಲ್ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪ ಸರ್ಕಾರದ ಮೇಲೆ ಕೇಳಿ ಬಂದಿದೆ.












Click it and Unblock the Notifications