ಸಿದ್ದರಾಮಯ್ಯಗೆ ಇತಿಹಾಸ ಓದಲು ಹೇಳಿದ ಕೇಂದ್ರ ಸಚಿವ
ಹುಬ್ಬಳ್ಳಿ, ಅಕ್ಟೋಬರ್ 19: ವೀರ ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರಿಗೆ ಗಟ್ಸ್ ಇದ್ದರೆ ಅಂಬೇಡ್ಕರ್ ಗೆ ಮೊದಲೇ ಭಾರತರತ್ನ ಕೊಡಿ ಅಂತ ಕೇಳಬೇಕಿತ್ತು. ಅಂಬೇಡ್ಕರ್ ಅವರಿಗೆ ಮೊದಲು ಭಾರತರತ್ನ ನೀಡದೇ ರಾಜೀವ್ ಗಾಂಧಿಯವರಿಗೆ ಕೊಡಲಾಯಿತು. ಅವರ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಬಳುವಳಿಯಾಗಿ ಕೊಡಲಾಯಿತು. ಸಂವಿಧಾನ ಬರೆದಿರುವ ಅಂಬೇಡ್ಕರ್ ಅವರಿಗೆ ಕೊಡಲಿಲ್ಲ. ದೇಶ ಕಂಡ ಅಪ್ರತಿಮ ವೀರಸಾವರ್ಕರ್ ಬಗ್ಗೆ ಅಪಮಾನ ಮಾಡೋದು ಸರಿಯಲ್ಲ. ಸಿದ್ಧರಾಮಯ್ಯ ಅವರ ಈ ನಡೆಯನ್ನು ಖಂಡಿಸುತ್ತೇನೆ. "ಸಿದ್ಧರಾಮಯ್ಯ ಅವರು ಮೊದಲು ಇತಿಹಾಸವನ್ನು ಸರಿಯಾಗಿ ಓದಿಕೊಂಡು ಮಾತನಾಡಲಿ" ಎಂದಿದ್ದಾರೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ಪೂರ್ಣಾವಧಿ ಬಿಜೆಪಿ ಸರ್ಕಾರ ಇರಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರ ಪ್ರತಿಭಟನೆ ಕುರಿತು ಉತ್ತರಿಸಿದ ಅವರು, "ಅವರ ಪ್ರತಿಭಟನೆ ನನ್ನ ಗಮನಕ್ಕೆ ಬಂದಿರಲಿಲ್ಲ. ಮಹದಾಯಿ ಇತ್ಯರ್ಥಕ್ಕೆ ನಮ್ಮ ಕಡೆಯಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಈ ವಿಚಾರ ಇತ್ಯರ್ಥಗೊಳ್ಳಲಿದೆ" ಎಂದು ತಿಳಿಸಿದರು.












Click it and Unblock the Notifications