Breaking: ಸರಳ ವಾಸ್ತು ಚಂದ್ರಶೇಖರ ಗುರುಜಿ ಕೊಲೆ ಪ್ರಕರಣ: 800 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಹುಬ್ಬಳ್ಳಿ, ಅಕ್ಟೋಬರ್ 6 : ಸರಳ ವಾಸ್ತು ಕಂಪನಿಯ ಸಂಸ್ಥಾಪಕ, ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿ ತನಿಖಾಧಿಕಾರಿಗಳು ಹಂತಕರಿಬ್ಬರ ವಿರುದ್ಧ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸುಮಾರು 800ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖಾಧಿಕಾರಿ ಎಸಿಪಿ ವಿನೋದ್ ಮುಕ್ತೇದಾರ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. 800ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿಯು ಕೊಲೆಗೆ ಕಾರಣವಾದ ಗುರೂಜಿ ಮತ್ತು ಆರೋಪಿಗಳಿಬ್ಬರ ನಡುವಿನ ಆಸ್ತಿ ವಿವಾದ ಸೇರಿದಂತೆ, ಇತರ ವಿಷಯಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಶೇಖರ್ ಗುರೂಜಿ ಹತ್ಯೆಗೆ ಸಂಬಂಧಿಸಿ ಪೊಲೀಸರು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಘಟನೆ ನಡೆದ 4 ತಾಸಿನೊಳಗೆ ಪೊಲೀಸರು ಹಂತಕರನ್ನು ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ವಶಕ್ಕೆ ಪಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಬಂಧಿತರ ವಿರುದ್ಧ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಸಹಿತ ಕೊಲೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ಕುರಿತು ಕಲೆ ಹಾಕಲಾದ ಮಾಹಿತಿ ಹಾಗೂ ಸಂಗ್ರಹಿಸಿದ ಸಾಕ್ಷಿಗಳು ಸೇರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಗಳಿಂದ ಮಾಹಿತಿ ತಿಳಿದು ಬಂದಿದೆ.
ಹತ್ಯೆಗೆ ಕಾರಣ?
ಗೋಕುಲ ರಸ್ತೆ ಬಳಿ ಮಹಾಂತೇಶನ ಹೆಸರಲ್ಲಿ ಚಂದ್ರಶೇಖರ್ ಗುರೂಜಿ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದ್ದು, ಅದನ್ನು 5 ಕೋಟಿಗೆ ಮಹಾಂತೇಶ ಮಾರಾಟ ಮಾಡಿದ್ದ. ಆ ಹಣ ನೀಡುವಂತೆ ಗುರೂಜಿ ಒತ್ತಡ ಹಾಕುತ್ತಿದ್ದರು. ಈ ವಿಚಾರಕ್ಕೆ ಇಬ್ಬರ ನಡುವೆ ಅನೇಕ ಸಲ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಮಹಾಂತೇಶ, ತನ್ನ ಸಹಚರ ಮಂಜುನಾಥ ಮರೇವಾಡನೊಂದಿಗೆ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿತ್ತು.
ಅಲ್ಲದೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸಕ್ಕಿದ್ದ ಮಂಜುನಾಥ್ ಮತ್ತು ಮಹಂತೇರ್ಶ್ ಸಂಸ್ಥೆ ಹೆಸರಲ್ಲಿ ಹಣ ಪಡೆದು ವಂಚಿಸಿದ್ದರು ಎಂಬ ಕಾರಣಕ್ಕೆ ಗುರೂಜಿ 2016ರಲ್ಲಿ ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು. ಆಸ್ತಿ ಹಾಗೂ ಹಣಕಾಸಿನ ವಿಷಯದಲ್ಲಿ ಇಬ್ಬರ ನಡುವೆ ಏರ್ಪಟ್ಟ ಕಲಹವೇ ಹತ್ಯೆಗೆ ಕಾರಣವಾಗಿದೆ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದರು.












Click it and Unblock the Notifications