ಬಿಟ್ಟು ಹೋದ ಬ್ಯಾಗ್ ವಾಪಸ್ ಕೊಡಿಸಿದ ಸಾರಿಗೆ ಸಿಬ್ಬಂದಿ
ಹುಬ್ಬಳ್ಳಿ, ಅಕ್ಟೋಬರ್ 01 : ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಬ್ಯಾಗ್ ಅನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಿಬ್ಬಂದಿ ಮಾಲೀಕರಿಗೆ ತಲುಪಿಸಿ ಪ್ರಮಾಣಿಕತೆ ಮೆರೆದಿದ್ದಾರೆ. ಶುಕ್ರವಾರ ಸಂಜೆ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆಸಿದೆ.
ಪ್ರಯಾಣಿಕರು ಬಿಟ್ಟು ಹೊಗಿದ್ದ ಬ್ಯಾಗ್ ಹುಡುಕಿಸಿ ಕೊಟ್ಟಿರುವುದು ಬಸ್ ನಿಲ್ದಾಣದ ಅಧಿಕಾರಿ ಬಿ.ಎಸ್.ಮುದ್ಗಲ್. ಮಹಾಲಿಂಗ ಭಟ್ ಎಂಬುವರು ಧಾರವಾಡದ ಬಳಿ ಇರುವ ಕಿರೆಸೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ಆದರೆ, ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಬ್ಯಾಗ್ ಮರೆತು ಬಸ್ಸಿನಲ್ಲಿ ಇಟ್ಟಿದ್ದರು.

ಬ್ಯಾಗ್‌ನಲ್ಲಿ 50 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ, ಮೊಬೈಲ್ ಮತ್ತು ನಗದು ಇತ್ತು. ಮಹಾಲಿಂಗ್ ಭಟ್ ಅವರು ಈ ಬಗ್ಗೆ ಬಸ್ ನಿಲ್ದಾಣದ ಅಧಿಕಾರಿ ಬಿ.ಎಸ್.ಮುದ್ಗಲ್ ಅವರಿಗೆ ಮಾಹಿತಿ ನೀಡಿದರು, ಬ್ಯಾಗ್ ಹುಡುಕಿಸಿಕೊಡುವಂತೆ ಮನವಿ ಮಾಡಿದ್ದರು.
ಮುದ್ಗಲ್ ಅವರು ತಕ್ಷಣ ಬಸ್ ಎಲ್ಲಿಗೆ ಹೋಗಿದೆ? ಎಂಬುದನ್ನು ತಿಳಿದುಕೊಂಡರು. ಬಸ್ ರೋಣದಲ್ಲಿರುವ ಮಾಹಿತಿ ಸಿಕ್ಕಿತು. ರೋಣ ಡಿಪೋ ಸಂಪರ್ಕಿಸಿ, ಬಸ್ಸಿನಲ್ಲಿ ಬ್ಯಾಗ್ ಸಿಕ್ಕರೆ ಬೇರೆ ಬಸ್ ಮುಖಾಂತರ ಕೂಡಲೇ ಹುಬ್ಬಳ್ಳಿ ಬಸ್ ನಿಲ್ದಾಣಕ್ಕೆ ತಲುಪಿಸುವಂತೆ ಸೂಚನೆ ನೀಡಿದರು.
ರೋಣದ ಡಿಪೋ ಸಿಬ್ಬಂದಿ ಬ್ಯಾಗ್ ಪತ್ತೆ ಹಚ್ಚಿ, ಬೇರೆ ಬಸ್ ಮೂಲಕ ಹುಬ್ಬಳ್ಳಿಗೆ ತಲುಪಿಸಿದರು. ನಂತರ ಮುದ್ಗಲ್ ಅವರು ಬ್ಯಾಗ್ ಕಳೆದುಕೊಂಡಿದ್ದ ಮಹಾಲಿಂಗ್ ಭಟ್ ಅವರಿಗೆ ಬ್ಯಾಗ್ ಹಸ್ತಾಂತರ ಮಾಡಿದರು. ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications