NWKRTC bus accident: ಅನ್ನದಾತನಿಗೆ ₹25 ಲಕ್ಷ ಪರಿಹಾರಕ್ಕೆ ಆಗ್ರಹ
ಹುಬ್ಬಳ್ಳಿ, ಜುಲೈ 19: ತಾಲೂಕಿನ ಕುಸಗಲ್ ಬಳಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ (NWKRTC) ಚಾಲಕನ ರೀಲ್ಸ್ ಹುಚ್ಚಿಗೆ ಚಕ್ಕಡಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಚಕ್ಕಡಿಯಲ್ಲಿದ್ದ ರೈತರಿಗೆ ಗಂಭೀರ ಗಾಯಗಳಾಗಿವೆ. ಎರಡು ಎತ್ತುಗಳೂ ಸ್ಥಳದಲ್ಲೇ ಸಾವನ್ನಪ್ಪಿವೆ. ಸಂತ್ರಸ್ತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಹೌದು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ (NWKRTC) ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆ ಹೊರಟಿತ್ತು. ಬಸ್ ಚಾಲಕ ನಿಯಮ ಮೀರಿ ಮೊಬೈಲ್ ನಲ್ಲಿ ರೀಲ್ಸ್ ಮಾಡಿಕೊಂಡು ವಾಹನ ಚಲಾಯಿಸುತ್ತಿದ್ದ. ಈ ವೇಳೆ ಎದುರಿಗೆ ರಸ್ತೆಯಲ್ಲಿ ಹೊರಟಿದ್ದ ಚಕ್ಕಡಿಗೆ ಹಿಂದಿನಿಂದ ಗುದ್ದಿದ್ದ ಘಟನೆ ಬುಧವಾರ ನಡೆದಿತ್ತು.

ಘಟನೆಗೆ ಪ್ರತಿಕ್ರಿಯಿಸಿ ಮಾತನಾಡಿದ, ರತ್ನ ಭಾರತ ರೈತ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಹೇಮನಗೌಡರ ಬಸನಗೌಡರ ಅವರು, ಸರ್ಕಾರಿ ಬಸ್ ಚಾಲಕನ ಹುಚ್ಚಾಟದಿಂದ ರೈತನ ಎರಡು ಎತ್ತು ಮೃತಪಟ್ಟಿವೆ. ರೈತನಿಗೆ ಗಂಭೀರ ಗಾಯವಾಗಿದೆ.
ಕೂಡಲೇ ಬಸ್ ಚಾಲಕನ ಮೇಲೆ ಕ್ರಮ ಕೈಗೊಳ್ಳಬೇಕು.
ಗಾಯಾಳು ರೈತನಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕು. ಚಕ್ಕಡಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡು ಎತ್ತುಗಳು ಸಾವು ಆಗಿದೆ. ರೈತ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಸರ್ಕಾರಿ ನೌಕರನ ಬೇಜವಾಬ್ದಾರಿ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇಂತಹ ಸಿಬ್ಬಂದಿ ವಿರುದ್ಧ ಸಾರಿಗೆ ನಿಗಮ ಕ್ರಮ ಕೈಗೊಳ್ಳಲಿ
ಬಸ್ ಡ್ರೈವರ್ ಚಾಲನಾ ಸಂದರ್ಭದಲ್ಲಿ ಮೊಬೈಲ್ ಉಪಯೋಗ ಆಗಿದೆ. ರೀಲ್ಸ್ ವಿಡಿಯೋ ಮಾಡುವಾಗ ರಸ್ತೆಯಲ್ಲಿ ಬಸ್ಸಿನ ಮುಂದೆ ಇದ್ದ ಚಕ್ಕಡಿ ಕಾಣದೇ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಅನ್ನದಾತನಿಗೆ ಆಧಾರವಾಗಿದ್ದ ಎರಡು ಎತ್ತುಗಳು ಬಲಿಯಾಗಿವೆ.
ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾರಿಗೆ ಸಿಬ್ಬಂದಿ ಬೇಜಾಬ್ದಾರಿತನ ಹೆಚ್ಚಾಗುತ್ತಿದೆ. ಸಾರಿಗೆ ಅಧಿಕಾರಿಗಳು ಇಂತಹ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ರೈತರು ಕೃಷಿ ಚಟುವಟಿಕೆಗಾಗಿ ರಸ್ತೆಯಲ್ಲಿ ಹೋಗಲು ಸಹ ಆಗುತ್ತಿಲ್ಲ ಎಂದು ಅವರು ದೂರಿದರು.
ರಾಜೀ ಇಲ್ಲದೇ ತನಿಖೆ ಮಾಡಿ: ಹೋರಾಟ ಎಚ್ಚರಿಕೆ
ಇನ್ನೂ ಸದರಿ ಪ್ರಕರಣ ಸಂಬಂಧ ಯಾವುದೇ ಕಾರಣಕ್ಕೋ ರಾಜೀ ಮಾಡಿಕೊಳ್ಳದೇ ತನಿಖೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮೇಲಿಂದ ಮೇಲೆ ರೈತರಿಗೆ ತೊಂದರೆ ಆಗುತ್ತಿದೆ. ರೈತರಿಗೆ, ಸಾರ್ವಜನಿಕರಿಗೆ ಬಸ್‌ಗಳಿಂದ, ಚಾಲಕರಿಂದ ತೊಂದರೆ ಆಗದಂತೆ ನಿಗಮದ ಮೇಲಾಧಿಕಾರಿಗಳು ಗಮನ ಹರಿಸಬೇಕು. ನಮ್ಮ ಮನವಿ ನಿರ್ಲಕ್ಷಿಸಿದರೆ, ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications