NWKRTC Special Bus: ದೂಧ್‌ಸಾಗರ್ ಸಮೀಪ ಹಳಿ ತಪ್ಪಿದ್ದ ರೈಲು, ಗೋವಾಗೆ ವಿಶೇಷ ಬಸ್ ಸೇವೆ
ಹುಬ್ಬಳ್ಳಿ, ಆಗಸ್ಟ್ 10: ಕರ್ನಾಟಕ-ಗೋವಾ ಮಾರ್ಗದಲ್ಲಿನ ದೂಧ್‌ಸಾಗರ್ ಬಳಿ ಗೂಡ್ಸ್ ಟ್ರೈನ್ ಹಳಿತಪ್ಪಿದ್ದರಿಂದ ರೈಲು ಸಂಚಾರ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿಯಿಂದ ಗೋವಾಕ್ಕೆ 27 ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಹೌದು, ಶುಕ್ರವಾರ ನೈಋತ್ಯ ರೈಲ್ವೆ ವಲಯ 'ದೂಧ್ ಸಾಗರ ಹಾಗೂ ಸೋನಾಲಿಂ ರೈಲು ಮಾರ್ಗ'ದ ಮಧ್ಯೆ ಕ್ಯಾಸೆಕ್ ರಾಕ್ ಬಳಿ ಕಲ್ಲಿದ್ದ ಹೊತ್ತ ಗೂಡ್ಸ್ ರೈಲಿನ ಹನ್ನೊಂದು ಬೋಗಿಗಳು ಹಳಿ ತಪ್ಪಿದವು. ಹೀಗಾಗಿ ಗೋವಾ ಮಾರ್ಗ ದಿಂದ ಹುಬ್ಬಳ್ಳಿ ವರೆಗೆ ರೈಲು ಸಂಚಾರ ಸೇವೆ ವ್ಯತ್ಯಯವಾಯಿತು. ಇದರಿಂದ ನೂರಾರು ಪ್ರಯಾಣಿಕರು ಸಂಕಷ್ಟ ಎದುರಿಸಬೇಕಾಯಿತು.

ಸದ್ಯ ಆ ರೈಲು ಪ್ರಯಾಣಿಕರಿಗಾಗಿ ಗೋವಾಗೆ ವಿಶೇಷ ಬಸ್ ವ್ಯವಸ್ಥೆ ಮಾಡಿರುವುದಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಕರ್ನಾಟಕ ಹಾಗೂ ಗೋವಾ ರಾಜ್ಯವನ್ನು ಸಂಪರ್ಕಿಸುವ ರೈಲು ಮಾರ್ಗದಲ್ಲಿ ದೂದ್ ಸಾಗರ್ ಬಳಿ ಗೂಡ್ಸ್ ಟ್ರೈನ್ ಹಳಿ ತಪ್ಪಿದ್ದರಿಂದ ಉಭಯ ರಾಜ್ಯಗಳ ನಡುವೆ ರೈಲು ಸಂಪರ್ಕ ಕಡಿತವಾಗಿದೆ. ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಶಾಲಿಮಾರ್ ನಿಂದ ವಾಸ್ಕೊಗೆ ಹೋಗಬೇಕಾಗಿದ್ದ ಅಮರಾವತಿ ಎಕ್ಸ್ ಪ್ರೆಸ್ ರೈಲನ್ನು ಹುಬ್ಬಳ್ಳಿಯಲ್ಲಿ ನಿಲ್ಲಿಸಲಾಗಿದೆ.
1300ಕ್ಕೂ ಹೆಚ್ಚು ಪ್ರಯಾಣಿಕರಿಗೆ ಆತಂಕ
ಆ ರೈಲಿನಲ್ಲಿ 1300ಕ್ಕೂ ಹೆಚ್ಚು ಪ್ರಯಾಣಿಕರು ವಾಸ್ಕೊ ರೈಲು ನಿಲ್ದಾಣದವರೆಗೆ ಪ್ರಯಾಣ ಮಾಡುವವರಿದ್ದರು. ರೈಲು ಸಂಚಾರ ಮೊಟಕುಗೊಳಿಸಿದ ಕಾರಣ ಮಕ್ಕಳು, ಮಹಿಳೆಯರು, ವಯಸ್ಸಾದವರು ಮತ್ತು ಲಗ್ಗೇಜುಗಳೊಂದಿಗೆ ತಲುಪುವುದು ಹೇಗೆ ಎಂಬ ಆತಂಕ ಎದುರಾಗಿತ್ತು.
ಈ ಎಲ್ಲ ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಿ ಸುಗಮವಾಗಿ ಪ್ರಯಾಣ ಮುಂದುರೆಸಲು ಅನುಕೂಲವಾಗುವಂತೆ ಹುಬ್ಬಳ್ಳಿಯಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡುವಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ಸಾರಿಗೆ ಸಂಸ್ಥೆಗೆ ಮನವಿ ಬಂದಿತ್ತು. ಅದರಂತೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿಯಿಂದ ಇಂದು 27 ಬಸ್ಸು ಸಂಚಾರ
ರೈಲು ಹುಬ್ಬಳ್ಳಿಗೆ ಆಗಮಿಸುವುದಕ್ಕೆ ಮುಂಚಿತವಾಗಿಯೇ ಬಸ್ಸುಗಳನ್ನು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ರೈಲು ಆಗಮಿಸುತ್ತಿದ್ದಂತೆ ಪ್ರಯಾಣಿಕರನ್ನು ಹತ್ತಿಸಿಕೊಂಡ ಒಟ್ಟು 27 ಬಸ್ಸುಗಳು ವಾಸ್ಕೋ, ಮಡಗಾಂವ ಹಾಗೂ ಪಣಜಿ ಕಡೆಗೆ ತೆರಳಿದವು.
ಇದರಿಂದ ಪ್ರಯಾಣಿಕರು ಸಂತೋಷದಿಂದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು. ಹೊರ ರಾಜ್ಯಗಳ ಪ್ರಯಾಣಿಕರ ಸಂಕಷ್ಟಕ್ಕೆ ತ್ವರಿತವಾಗಿ ಸ್ಪಂದಿಸಿ ಸಮಸ್ಯೆ ನಿವಾರಿಸಿದ ಸಾರಿಗೆ ಸಂಸ್ಥೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಷೆ ವ್ಯಕ್ತವಾಗಿದೆ.

ಕೋಲ್ಕತ್ತಾ ಪ್ರಯಾಣಿಕರೊಬ್ಬರು ಹೇಳಿದ್ದೇನು?
ಕೋಲ್ಕತ್ತಾ ಮೂಲದ ಪ್ರಯಾಣಿಕ ಸಂದೀಪ್ ಅವರು ಮಾತನಾಡಿ, 50 ಜನರ ಗುಂಪಿನಲ್ಲಿ ಪಶ್ಚಿಮ ಬಂಗಾಳದಿಂದ ಗೋವಾ ಪ್ರವಾಸಕ್ಕೆ ಆಗಮಿಸಿದ್ದೇವೆ. ರೈಲು ಸಂಚಾರದಲ್ಲಿ ವ್ಯತ್ಯವಾಗಿದ್ದರಿಂದ ಪ್ರಯಾಣ ಹೇಗೆ ಮುಂದುವರಿಸಬೇಕೆಂಬ ಆತಂಕ ಉಂಟಾಗಿತ್ತು.
ಆದರೆ ರೈಲ್ವೆ ಇಲಾಖೆ ಹಾಗೂ ಕರ್ನಾಟಕದ ಸಾರಿಗೆ ಸಂಸ್ಥೆಯವರು ಉತ್ತಮ ಸಮನ್ವಯ ಸಾಧಿಸಿಕೊಂಡು ಸಕಾಲದಲ್ಲಿ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ತೊಂದರೆ ನಿವಾರಣೆಯಾಗಿದೆ. ನಾವೆಲ್ಲರೂ ಖುಷಿಯಿಂದ ಪ್ರವಾಸ ಮಂದರಿಸುತ್ತಿದ್ದೇವೆ. ರೈಲ್ವೆ ಇಲಾಖೆ ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಧನ್ಯವಾದಗಳು ಹೇಳಿದರು.
ನೈರುತ್ಯ ರೈಲ್ವೇ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನೂಪ ದಯಾನಂದ ಸಾಧು ಮಾತನಾಡಿ, ತಮ್ಮ ಮನವಿಗೆ ಸ್ಪಂದಿಸಿ ಸಕಾಲದಲ್ಲಿ ಬಸ್ ಗಳ ವ್ಯವಸ್ಥೆ ಮಾಡಿದ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ., ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹಾಗೂ ಇತರೆ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.
ವಿಭಾಗೀಯ ತಾಂತ್ರಿಕ ಇಂಜಿನಿಯರ್ ಪಿ.ವೈ.ಗಡಾದ, ಡಿಪೊ ಮ್ಯಾನೇಜರ್ ಗಳಾದ ರೋಹಿಣಿ, ನಾಗರಾಜ, ಮುನ್ನಾಸಾಬ್,ಸಹಾಯಕ ಸಂಚಾರ ವ್ಯವಸ್ಥಾಪಕ ಐ.ಜಿ.ಮಾಗಾಮಿ, ನಿಲ್ದಾಣಾಧಿಕಾರಿ ಹಂಚಾಟೆ, ಸಂತೋಷ, ದಾವಲ್ ಸಾಬ ಬೂದಿಹಾಳ ಮತ್ತಿತರರು ವಿಶೇಷ ಬಸ್ ಗಳ ಸುಗಮ ಸಂಚಾರದ ಮೇಲ್ವಿಚಾರಣೆ ನಡೆಸಿದರು ಎಂದು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ಶನಿವಾರ ತಿಳಿಸಿದೆ.












Click it and Unblock the Notifications