ಬೆಳಗಾವಿ ಟಿಕೆಟ್ ಹಂಚಿಕೆಯಲ್ಲಿ ಕಗ್ಗಂಟಿಲ್ಲ: ಜಗದೀಶ್ ಶೆಟ್ಟರ್ ಕೊಟ್ಟ ಅಪ್ಡೇಟ್ ಏನು?
ಹುಬ್ಬಳ್ಳಿ, ಮಾರ್ಚ್ 24: ಲೋಕಸಭಾ ಚುನಾವಣಾ ಸ್ಪರ್ಧೆಯ ಪ್ರಮುಖ ಆಕಾಂಕ್ಷಿಯಾಗಿರುವ ಬಿಜೆಪಿ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಇದುವರೆಗೂ ಅಧಿಕೃತವಾಗಿಲ್ಲ. ಈ ಬಗ್ಗೆ ಸ್ವತಃ ಜಗದೀಶ್ ಶೆಟ್ಟರ್ ಅಪ್ಡೇಟ್ ಕೊಟ್ಟಿದ್ದಾರೆ.
ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಕಗ್ಗಂಟಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನನಗೆ ಟಿಕೆಟ್ ಸಿಗುತ್ತದೆ. ವರಿಷ್ಠರೊಂದಿಗೆ ಈಗಾಗಲೇ ಚರ್ಚಿಸಿದ್ದಾರೆ. ನನಗೆ ವಿಶ್ವಾಸವಿದೆ ಎಂದು ಅವರು ಮಾಹಿತಿ ನೀಡಿದರು.

ಬೆಳಗಾವಿ ಬಿಜೆಪಿ ಟಿಕೆಟ್ ನನಗೆ ನೀಡಲಿದ್ದು, ಸೋಮವಾರದ ಹೊತ್ತಿಗೆ ಟಿಕೆಟ್ ಘೋಷಣೆ ಆಗಲಿದೆ. ಇನ್ನೂ ಬೆಳಗಾವಿಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಈಗಾಗಲೇ ಬೆಳಗಾವಿ ಕ್ಷೇತ್ರದ ಹಲವು ನಾಯಕರು ನನಗೆ ಆಹ್ವಾನ ನೀಡುತ್ತಿದ್ದಾರೆ. ಅವರೊಂದಿಗೆ ನಾನು ಸಹ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದರು.
ದಿಂಗಾಲೇಶ್ವರ ಶ್ರೀ ಸ್ಪರ್ಧೆ: ಶೆಟ್ಟರ್ ಏನಂದ್ರು
ಧಾರವಾಡ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರುಗೆ ಐದನೇ ಬಾರಿಗೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ವಿನೋದ್ ಅಸೂಟಿ ಅವರಿಗೆ ಟಿಕೆಟ್ ಘೋಷಣೆ ಆಗಿದೆ. ಈ ಮಧ್ಯೆ ಇದೇ ಧಾರವಾಡ ಕ್ಷೇತ್ರದಿಂದ ಶಿರಹಟ್ಟಿಯ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳೀ ಬಂದಿವೆ.
ಶ್ರೀಗಳಿಗೆ ಸ್ಪರ್ಧಿಸುವಂತೆ ಲಿಂಗಾಯತ ನಾಯಕರು, ಭಕ್ತರಿಂದ ಒತ್ತಡವಿದೆ ಎನ್ನಲಾಗಿದೆ. ಈ ಕುರಿತ ಪ್ರಶ್ನೆಗೆ ಜಗದೀಶ್ ಶೆಟ್ಟರ್ ಅವರು, ನನಗೆ ಶ್ರೀಗಳ ಚುನಾವಣಾ ಸ್ಪರ್ಧೆ ಬಗ್ಗೆ ಗೊತ್ತಿಲ್ಲ ಎಂದಷ್ಟೇ ಉತ್ತರಿಸಿದರು.

ಜನ ಗ್ಯಾರೆಂಟಿ ನೋಡಿ ಮತ ಹಾಕಲ್ಲ
ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ನೋಡಿ ಜನರು ಮತ ಹಾಕುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಲೋಕಸಭಾ ಚುನಾವಣೆಯಲ್ಲಿ ಜನರು ಬೆಂಬಲ ನೀಡುತ್ತಾರೆ. ಮಹಿಳೆಯರಿಗೆ ನ್ಯಾಯ ಒದಗಿಸಿದ್ದು ನಮ್ಮ ಬಿಜೆಪಿ ಪಕ್ಷ.
ಮಹಿಳಾ ಮೀಸಲಾತಿ ಜಾರಿಗೆ ತರುತ್ತಿರುವುದು ಪ್ರಧಾನಿ ನರೇಂದ್ರ ಮೋದಿಯವರು ಎಂದು ಸುದ್ದಿಗಾರರ ಕೆಲವು ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ರಾಜ್ಯ ಸರ್ಕಾರ ಪತನವಾಗುತ್ತದೆ: ಶೆಟ್ಟರ್
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆ ಬಳಿಕೆ ಮನೆ ನಡೆಯುತ್ತಾರೆ. ಅವರು ರಾಜೀನಾಮೆ ನೀಡುತ್ತಾರೆ ಎಂದು ಜಗದೀಶ್ ಶೆಟ್ಟರ್ ಭವಿಷ್ಯ ನುಡಿದ್ದಾರೆ. ಅಲ್ಲದೇ ಸರ್ಕಾರ ಪತನವಾಗಲಿದೆ. ಅದಕ್ಕೆ ಬಿಜೆಪಿ ಕಾರಣವೆಂದು ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ, ಏಕೆಂದರೆ ಕಾಂಗ್ರೆಸ್ ಒಳಗಿನ ಆಂತರಿಕ ಕಲಹದಿಂದ ಸರ್ಕಾರ ಪತನವಾಗಲಿದೆ ಎಂದು ಅವರು ಹೇಳಿದರು.












Click it and Unblock the Notifications