ನೇಹಾ ಹತ್ಯೆ ಕೇಸ್: ಸಿಐಡಿಯಿಂದ ಚಾರ್ಜ್ ಶೀಟ್ ಸಲ್ಲಿಕೆ ಯಾವಾಗ?
ಹುಬ್ಬಳ್ಳಿ, ಮೇ 13: ಹಾಡಹಗಲೇ ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ನೇಹಾ ಕೊಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ಕೇಳಿಬಂದಿತು. ಪ್ರತಿಭಟನೆಗಳು ನಡೆದವು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಸಿಐಡಿ ತಂಡ ದೋಷಾರೋಪಣೆ ಪಟ್ಟಿ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಏಪ್ರಿಲ್ 18 ರಂದು ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬಾತ ಕಾಲೇಜಿನಲ್ಲೇ ಕೊಲೆ ಮಾಡಿದ್ದ. ಬಳಿಕ ನಿರಂಜನ್ ಅವರು ಈ ಪ್ರಕರಣದಲ್ಲಿ ಹಂತಕ ಫಯಾಜ್ ಅಷ್ಟೇ ಅಲ್ಲ ಇನ್ನೂ ಕೆಲವರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.

ಮಗಳ ಕೊಲೆಯ ಹಿಂದೆ ಲವ್ ಜಿಹಾದ್ ಇರಬಹುದು ಎಂದು ಸ್ವತಃ ನೇಹಾ ತಂದೆ ಆರೋಪಿಸಿದ್ದರು. ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿದ್ದರು.
ಈವರೆಗೆ ಹತ್ತು ಮಂದಿ ವಿಚಾರಣೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ತನಿಖೆ ನಡೆಸಲು ಸಿಐಡಿಗೆ ವಹಿಸಿತ್ತು. ಬಳಿಕ ತನಿಖೆ ಚುರುಕುಗೊಳಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಫಯಾಜ್ ಪೋಷಕರು ಹಾಗೂ ಇತರೇ 10 ಮಂದಿಯನ್ನು ಈವರೆಗೆ ತನಿಖೆಗೆ ಒಳಪಡಿಸಿದ್ದಾರೆ.
ಚಾರ್ಜ್‌ಶೀಟ್ ಸಲ್ಲಿಕೆ ಯಾವಾಗ?
ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಿಐಡಿ ತಂಡ ಅಗತ್ಯ ಮಾಹಿತಿ, ಪೊಲೀಸರಿಂದ ಕಡತ ಪಡೆದು ನಂತರ ಆರೋಪಿ ಸೇರಿದಂತೆ ಹಲವರನ್ನು ತನಿಖೆಗೆ ಒಳಪಡಿಸಿದ್ದಾರೆ. ಇದೀಗ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಸಿಐಡಿ ತಂಡ ಚಾರ್ಜ್ ಶೀಟ್ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದೆ. ಇನ್ನೊಂದೇ ವಾರದಲ್ಲಿ ಆರೋಪಿ ಕುರಿತು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎಂದು ಸಿಐಡಿ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಮೀನಾ ಕೊಲೆ ಕೇಸ್: ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಬಳಿಯ ಕುಂಬಾರಗಡಿಗೆ ಗ್ರಾಮದಲ್ಲಿ ಕೇಲ ದಿನಗಳ ಹಿಂದೆ ನಡೆದ SSLC ವಿದ್ಯಾರ್ಥಿನಿ ಮೀನಾ ಕೊಲೆ ನಡೆದಿತ್ತು. ಪ್ರಕರಣದ ಸಂಬಂಧ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳ ಸಂಘಟನೆಗಳಿಂದ ಸೋಮವಾರ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಮೃತ ವಿದ್ಯಾರ್ಥಿನಿ ಮೀನಾ ಭಾವಚಿತ್ರ ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಎಸ್ಎಸ್ಎಲ್ಸಿ ಫಲಿತಾಂಶ ಹೊರ ಬಿದ್ದ ದಿನವೇ ಬಾಲಕಿಯೊಂದಿಗೆ ನಿಗದಿಯಾಗಿದ್ದ ನಿಶ್ಚಿತಾರ್ಥ ಮುರಿದುಬಿದ್ದ ನಂತರ ಬಾಲಕಿಯ ಮನೆಗೆ ಹೋಗಿ ಪೋಷಕರ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಬಾಲಕಿಯನ್ನು ಎಳೆದಾಡಿ ರುಂಡ ಕತ್ತರಿಸಿದ್ದ. ಈ ಆರೋಪಿ ವಿರುದ್ಧ ಸರ್ಕಾರ ಗಂಭೀರ ಕ್ರಮ ತೆಗೆದುಕೊಳ್ಳಲಿಲ್ಲ.
ಒತ್ತಡದ ನಂತರ ಬಂಧನ
ಈ ಹಿಂದೆ, ಆರೋಪಿ ಕೃತ್ಯ ಎಸಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಆರೋಪಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ನಂತರ ಒತ್ತಡ ಬಂದ ಮೇಲೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಲಾಯಿತು ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಅಹಿಂದ್ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಬಾಬಾಜನ್ ಮುದೋಳ್, ಸಾಮಾಜಿಕ ಹೋರಾಟಗಾರ ರಾಜಶೇಖರ್ ಮೆಣಸಿನಕಾಯಿ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications