ಸಾವರ್ಕರ್ ಚಿತ್ರಕ್ಕೆ ಬೆಂಕಿಯಿಟ್ಟದ್ದು ಅಕ್ಷಮ್ಯ ಅಪರಾಧ : ಮುತಾಲಿಕ್-ಸೂಲಿಬೆಲೆ ಕಿಡಿ
ಧಾರವಾಡ, ಆಗಸ್ಟ್ 20 : ಶುಕ್ರವಾರ ಧಾರವಾಡ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಭಾವ ಚಿತ್ರ ಸುಟ್ಟು ಹಾಕಿರುವುದು ಹೇಯ ಕೃತ್ಯ, ದೇಶದ್ರೋಹಿ ಕೃತ್ಯ. ಅವರು ಭಾವಚಿತ್ರ ಸುಟ್ಟಿಲ್ಲ, ಭಾರತ ಮಾತೆಯನ್ನು ಸುಟ್ಟಿದ್ದಾರೆ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಭಾವ ಚಿತ್ರ ಸುಟ್ಟು ಹಾಕಿರುವ ವಿಚಾರಕ್ಕೆ ಮಾತನಾಡಿದ ಮುತಾಲಿಕ್, " ಅವರು ಸುಟ್ಟಿದ್ದು ಭಾವಚಿತ್ರವಲ್ಲ ಭಾರತ ಮಾತೆಯನ್ನು, ದೇಶಕ್ಕಾಗಿ ತನ್ನ ಜೀವನವನ್ನು ಜೈಲಿನಲ್ಲೇ ಕಳೆದಂತ ವ್ಯಕ್ತಿ, ಎರಡು ಬಾರಿ ಕರಿನೀರಿನ ಶಿಕ್ಷೆ ಅನುಭವಿಸಿದ ವ್ಯಕ್ತಿಯ ಭಾವ ಚಿತ್ರವನ್ನು ಸುಟ್ಟಿದ್ದಾರೆ. ಇಂತಹವರಿಗೆ ಪ್ರತಿಭಟಿಸುವ ಯೋಗ್ಯತೆಯಿಲ್ಲ" ಎಂದು ಕಿಡಿ ಕಾರಿದರು.
"ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಹೊಗೆದಿದ್ದು ತಪ್ಪು ಎಂದು ಎಲ್ಲರೂ ಹೇಳಿದ್ದಾರೆ, ನಾನು ಹೇಳುತ್ತೇನೆ. ಆದರೆ ಸಾವರ್ಕರ್ ರನ್ನು ನಿಮ್ಮ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯೇ ಅಪ್ರತಿಮ ದೇಶದ ಭಕ್ತ ಎಂದು ಹೇಳಿದ್ದಾರೆ. ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ . ಇದನ್ನು ಕಾಂಗ್ರೆಸ್‌ನ ಆಯೋಗ್ಯ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಹೇಗೆ ಮಾಡಬೇಕು ಎನ್ನುವುದನ್ನು ಅರಿತು ಕೊಳ್ಳಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವರ್ಕರ್ ಫೋಟೋ ಸುಟ್ಟವರು ಕ್ಷಮೆ ಕೇಳಬೇಕು, ನಮ್ಮ ಮುಂದೆಯಲ್ಲ, ಭಾರತ ಮಾತೆಯ ಮುಂದೆ ಕ್ಷಮೆ ಕೇಳಬೇಕು. ನೀವು ಮಾಡಿರುವುದು ಅಕ್ಷಮ್ಯ ಅಪರಾದ, ಕ್ಷಮೆ ಕೇಳಲಿಲ್ಲವಾದರೆ ಯಾರು ಸುಟ್ಟಿದ್ದಾರೋ ಅವರ ಮನೆ ಮುಂದೆ ಎದುರು ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಮಠ ಭೇಟಿ ನಾಟಕ
ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಶೃಂಗೇರಿ ಮಠಕ್ಕೆ ಹೋಗಿ ಉದ್ದ-ಅಡ್ಡ ನಮಸ್ಕಾರ ಮಾಡುತ್ತಾರೆ, ಇದೆಲ್ಲಾ ನಾಟಕ ಎಂಬುದು ರಂಬಾಪುರಿ, ಶೃಂಗೇರಿ ಮಠದ ಸ್ವಾಮೀಜಿ ಸೇರಿದಂತೆ ಇಡೀ ರಾಜ್ಯದ ಎಲ್ಲಾ ಮಠದ ಸ್ವಾಮೀಜಿಗಳಿಗೆ ಗೊತ್ತಿದೆ. ಚುನಾವಣೆ ಬಂತು ಎಂದು ನಾಟಕ ಮಾಡುತ್ತಾರೆ. ಸಿದ್ದರಾಮಯ್ಯ ನಾಸ್ತಿಕರು, ಕುಂಕುಮ ಹಾಕುವ ವ್ಯಕ್ತಿಗಳನ್ನು ಕಂಡರೆ ಕೆಂಡ ಕಾರುತ್ತಾರೆ. ಕೇಸರಿ ಬಟ್ಟೆ ಕಂಡರೆ ಬೆಂಕಿಯಾಗುತ್ತಾರೆ. ಇಂತಹ ವ್ಯಕ್ತಿ ದಿಢೀರ್ ದೇವಾಲಯಕ್ಕೆ ಮಠಕ್ಕೆ ಏಕೆ ಹೋಗುತ್ತಾರೆ ಎನ್ನುವುದು ಜನರಿಗೆ ಗೊತ್ತಿದೆ. ಅವರೆಲ್ಲ ಅಧಿಕಾರ, ಮತಕ್ಕೋಸ್ಕರ ಹೋಗುತ್ತಾರೆ ಹೊರೆತು , ಭಕ್ತಿ ಭಾವಗಳಿಂದಲ್ಲ. ಕಳೆದ 60 ವರ್ಷಗಳಿಂದ ಅವರ ಆಡಳಿತವನ್ನು ಮತದಾರರು ನೋಡಿದ್ದಾರೆ, ಇವರಿಗೆ ಮುಂದಿನ ಚುನಾವಣೆಯಲ್ಲಿ ಮಣ್ಣು ಮುಕ್ಕಿಸುತ್ತಾರೆ ಎಂದರು.
ರಾಷ್ಟ್ರಭಕ್ತರಿಗೆ ಅವಮಾನಿಸುವ ಪ್ರಕ್ರಿಯೆ ಕಾಂಗ್ರೆಸ್‌ನಲ್ಲಿ
"ಧಾರವಾಡದಲ್ಲಿ ಸಾವರ್ಕರ್ ಭಾವಚಿತ್ರ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನವರ ಈ ಕೃತ್ಯಕ್ಕೆ ಪ್ರತಿಕ್ರಿಯೆಸಲು ಇಚ್ಛಿಸುವುದಿಲ್ಲ. ಕಾಂಗ್ರೆಸ್‌ನವರ ಈ ವರ್ತನೆ ಹೊಸ ಬೆಳವಣಿಗೆ ಏನಲ್ಲ. ಸಾವರ್ಕರ್ ಮತ್ತು ರಾಷ್ಟ್ರಭಕ್ತರಿಗೆ ಅವಮಾನಿಸೋ ಪ್ರಕ್ರಿಯೆ ಕಾಂಗ್ರೆಸ್‌ನಲ್ಲಿ ಯಾವಾಗಲೂ ಇದೆ," ಎಂದು ಯುವಾ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

"ದುರದುಷ್ಟಕರ ಅಂದರೆ ನಾವು ಧಾರವಾಡಕ್ಕೆ ಬಂದಾಗಲೆ ಹೀಗೆ ಆಗಿದೆ. ಧಾರವಾಡ ತಿಲಕರು ಬಂದು ಹೋದ ಜಾಗ. ಆಲೂರ ವೆಂಕಟರಾಯರು ತಿಲಕ ಭಾಷಣ ಕನ್ನಡಕ್ಕೆ ಇಲ್ಲಿಯೇ ಅನುವಾದಿಸಿದ್ದರು. ಕರ್ನಾಟಕದ ಏಕೀಕರಣದ ಚಿಂತನೆ ಬೀಜ ಹಾಕಿದ್ದು ಧಾರವಾಡದಲ್ಲಿ. ಇತಿಹಾಸಕ್ಕೆ ನಾವು ಇಷ್ಟು ಗೌರವ ಕೊಟ್ಟು ಧಾರವಾಡಕ್ಕೆ ಬಂದಿದ್ದೇವೆ.
ಇಂತಹ ವೇಳೆ ಕಾಂಗ್ರೆಸ್‌ನವರು ಇತಿಹಾಸವನ್ನು ತುಚ್ಚವಾಗಿ ಕಾಣು ತೋರಿಸುತ್ತಿದ್ದಾರೆ," ಎಂದು ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದರು.
"ಇತಿಹಾಸ ಪುರುಷರನ್ನು ಅವಮಾನಿಸುತ್ತಿದ್ದಾರೆ. ಇದು ಖಂಡನೀಯ. ಇದು ಕಾಂಗ್ರೆಸ್‌ಗಂತೂ ಒಳ್ಳೆಯದಲ್ಲ. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದೇವೆ. ಇಂಥಹ ಸಮಯದಲ್ಲಿ ಸಾವರ್ಕರ್‌ಗೆ ಅವಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯರು ಇಂತಹವರಿಗೆ ತಿದ್ದಿ ಬುದ್ಧಿ ಹೇಳಬೇಕಾದ ಅಗತ್ಯವಿದೆ. ಮೊಟ್ಟೆ ಎಸೆದಿದ್ದನ್ನೂ ನಾವೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಸಾವರ್ಕರ್‌ಗೆ ಮೊಟ್ಟೆ ಎಸೆದಾಗ ಸಿದ್ದರಾಮಯ್ಯ ಮೌನವಾಗಿದ್ದಾರೆ. ಇದು ಬಹಳ ದುರದುಷ್ಟಕರ ಸಂಗತಿ. ಸಿದ್ದರಾಮಯ್ಯ ಅವರಿಗಿಂತ ಹೆಚ್ಚಿನ ರಾಷ್ಟ್ರ ಕಾರ್ಯ ಸಾವರ್ಕರ್ ಮಾಡಿದ್ದಾರೆ. ಇತಿಹಾಸ ಪುರುಷರಿಗೆ ಗೌರವ ಕೊಡುವ ಪದ್ಧತಿ ಕಾಂಗ್ರೆಸ್‌ಗರು ಕಲಿಯಬೇಕು," ಎಂದು ಸೂಲಿಬೆಲೆ ಹೇಳಿದರು.












Click it and Unblock the Notifications