ಒಂದು ಕೋಟಿ ವಿಮೆ ಹಣಕ್ಕಾಗಿ ಸಹೋದರನಿಂದಲೇ ಕೊಲೆ
ಹುಬ್ಬಳ್ಳಿ, ಮೇ 24: ಒಂದು ಕೋಟಿ ರುಪಾಯಿಯ ವಿಮೆ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಸಹೋದರನನ್ನೇ ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಗೋಳ ತಾಲೂಕು ಸಂಶಿ ಗ್ರಾಮದ ಶಿವರಾಜ ಕೊಡ್ಲಿವಾಡ ಆರೋಪಿ. ಹಣಕ್ಕಾಗಿ ತನ್ನ ಸಹೋದರ ನಾಗರಾಜ ಕೊಡ್ಲಿವಾಡ ಎಂಬಾತನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ನವನಗರದಿಂದ ಬೈಕ್ ನಲ್ಲಿ ಹೋಗುತ್ತಿದ್ದಾಗ ಸಂಶಿ ಚಾಕಲಬ್ಬಿ ರಸ್ತೆಯಲ್ಲಿ ಬಿದ್ದು, ನಾಗರಾಜ ಮೃತಪಟ್ಟಿದ್ದ ಎಂದು ಶಿವರಾಜ ಕುಂದಗೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಮರಣೋತ್ತರ ಪರೀಕ್ಷೆ ವೇಳೆ ತಲೆಯಲ್ಲಿ ಮಾತ್ರ ಗಾಯವಾಗಿರುವುದು ಕಂಡುಬಂದಿತ್ತು. ದೇಹದ ಯಾವುದೇ ಭಾಗದಲ್ಲಿ ತರಚಿದ ಗಾಯ ಕೂಡ ಇರಲಿಲ್ಲ.

ಆಗ ಪೊಲೀಸರಿಗೆ ಅನುಮಾನ ಬಂದು ನಾಗರಾಜನ ಪತ್ನಿ ಬಳಿ ವಿಚಾರಿಸಿದ್ದಾರೆ. ಆಗ ಆಕೆ ಶಿವರಾಜನ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಆ ಮೇಲೆ ವಿಚಾರಣೆ ವೇಳೆ ಶಿವರಾಜ ಸತ್ಯ ಬಾಯಿಬಿಟ್ಟಿದ್ದಾನೆ. ಸಹೋದರನಿಗೆ ಚೆನ್ನಾಗಿ ಕುಡಿಸಿ, ಆತ ಮಲಗಿದ್ದ ವೇಳೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾಗಿ ಹೇಳಿದ್ದಾನೆ.
ಆ ನಂತರ ನೀರಿನ ಟ್ಯಾಂಕರ್ ವೊಂದರಲ್ಲಿ ಶವ ಹಾಕಿಕೊಂಡು ಬಂದು, ರಸ್ತೆಯಲ್ಲಿ ಬಿಸಾಡಿದ್ದೆ. ಒಂದು ಕೋಟಿ ರುಪಾಯಿ ವಿಮೆ ಹಣಕ್ಕಾಗಿ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications