ಖರ್ಗೆ ಸಿಎಂ ಆಗದಿರಲು ಕಾರಣ ಬಹಿರಂಗಗೊಳಿಸುತ್ತೇನೆ: ಕೆ.ಎಚ್.ಮುನಿಯಪ್ಪ
Recommended Video
ಹುಬ್ಬಳ್ಳಿ, ಮೇ 16: 'ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ಸಿಎಂ ಆಗಬೇಕಿತ್ತು' ಎಂಬ ಕುಮಾರಸ್ವಾಮಿ ಹೇಳಿಕೆ ಅವರ ನಿರೀಕ್ಷೆಯಂತೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಹುಟ್ಟುಹಾಕಿದಂತಿದೆ.
ಖರ್ಗೆ ಅವರ ಬಹುವರ್ಷಗಳ ಸ್ನೇಹಿತ, ಅನುಯಾಯಿ, ದಲಿತ ಮುಖಂಡ ಕೆ.ಎಚ್.ಮುನಿಯಪ್ಪ ಅವರು ಸಹ ಖರ್ಗೆ ಸಿಎಂ ಸ್ಥಾನಕ್ಕೆ ಅರ್ಹರು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದರ ಜೊತೆಗೆ ಖರ್ಗೆ ಸಿಎಂ ಏಕೆ ಆಗಲಿಲ್ಲ ಎಂಬ ಬಗ್ಗೆ ಸಹ ಕಾರಣ ಬಹಿರಂಗಗೊಳಿಸುತ್ತೇನೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಸಂಸದ ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅರ್ಹತೆ ಇದ್ದರೂ ಸಹ ಏಕೆ ಸಿಎಂ ಆಗಲಿಲ್ಲ ಎಂಬ ಕಾರಣವನ್ನು ಉಪಚುನಾವಣೆ ಬಳಿಕ ಬಹಿರಂಗಗೊಳಿಸುತ್ತೇನೆ ಎಂದಿದ್ದಾರೆ.
ಸಿಎಂ ಹುದ್ದೆ ವಿಚಾರದಲ್ಲಿ ಖರ್ಗೆ ಅವರಿಗೆ ಅನ್ಯಾಯವಾಗಿದೆ ಎಂದ ಅವರು, ಕರ್ನಾಟಕ ಸಿಎಂ ಆಗಲು ಎಲ್ಲ ವಿಧದಲ್ಲೂ ಖರ್ಗೆ ಅವರು ಅರ್ಹರಾಗಿದ್ದರು ಎಂದು ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಬಿರುಸುಗೊಂಡ ಸಿಎಂ ಹುದ್ದೆ ಚರ್ಚೆ
ಮಲ್ಲಿಕಾರ್ಜುನ ಖರ್ಗೆ ಅವರು ಎಂದೋ ಸಿಎಂ ಆಗಬೇಕಿತ್ತು, ಅವರು ಸಿಎಂ ಸ್ಥಾನಕ್ಕೆ ಅರ್ಹರಿದ್ದರು ಎಂದು ಕುಮಾರಸ್ವಾಮಿ ಅವರು ಮುಂದಿನ ಸಿಎಂ ನಾನೇ ಎನ್ನುತ್ತಿದ್ದ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರೇವಣ್ಣ ಸಹ ಅರ್ಹರು ಎನ್ನುವ ಮೂಲಕ ಕುಮಾರಸ್ವಾಮಿ ಅವರನ್ನು ಸುಮ್ಮನಾಗಿಸಿದರು.

ಎಚ್‌ಡಿಕೆ ಹೇಳಿಕೆಗೆ ಖರ್ಗೆ ಪ್ರತಿಕ್ರಿಯೆ
ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಲ್ಲಿಕಾರ್ಜುನ ಖರ್ಗೆ, ಪದೇ-ಪದೇ ದಲಿತ ಸಿಎಂ ಎಂದು ಹೇಳಿ ಅವಮಾನ ಮಾಡಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಹಿಂದಿನಿಂದಲೂ ಸಿಎಂ ರೇಸಲ್ಲಿ ಖರ್ಗೆ ಹೆಸರು
ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂಬ ಕೂಗು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ. ಎಸ್.ಎಂ.ಕೃಷ್ಣ ಅವರು ಸಿಎಂ ಆದಾಗಿನಿಂದಲೂ ಮುಖ್ಯಮಂತ್ರಿ ಹುದ್ದೆ ರೇಸಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ಇದ್ದೇ ಇದೆ ಆದರೆ ಅವರು ಸಿಎಂ ಅವರಿಗೆ ಪ್ರತಿ ಬಾರಿಯೂ ಸಿಎಂ ಸ್ಥಾನ ತಪ್ಪಿದೆ.

ದಲಿತ ಸಿಎಂ ಚರ್ಚೆ ಮತ್ತೆ ಮುನ್ನೆಲೆಗೆ
ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರೇ ಒಮ್ಮೆ ನಾನು ಸಿಎಂ ಆಗುವುದನ್ನು ಮೂರು ಬಾರಿ ತಪ್ಪಿಸಲಾಗಿತ್ತು ಎಂದು ಹೇಳಿದ್ದರು. ದಲಿತ ಎಂಬ ಕಾರಣಕ್ಕೆ ಸಿಎಂ ಪಟ್ಟ ಸಿಗಲಿಲ್ಲವೆಂದು ಪರಮೇಶ್ವರ್ ಅವರು ಒಮ್ಮೆ ಹೇಳಿದ್ದರು. ಕುಮಾರಸ್ವಾಮಿ ಅವರು ಹೊಸದಾಗಿ ನೀಡಿರುವ ಹೇಳಿಕೆಯಿಂದಾಗಿ ಈಗ ಮತ್ತೆ ಚರ್ಚೆಗಳು ಪ್ರಾರಂಭವಾಗಿವೆ.












Click it and Unblock the Notifications