ಕಲಘಟಗಿ ತಾಲೂಕಿನ ಶಿಗನಳ್ಳಿ ಗ್ರಾಮದಲ್ಲಿ ಚಿರತೆ ಸೆರೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಹುಬ್ಬಳ್ಳಿ, ಜೂನ್, 09: ಕಲಘಟಗಿ ತಾಲೂಕಿನ ಶಿಗನಳ್ಳಿ ಗ್ರಾಮದಲ್ಲಿ ಚಿರತೆ ಪತ್ತೆಯಾಗಿದ್ದು, ಇದರಿಂದ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು.. ಶಿಗನಳ್ಳಿ ಗ್ರಾಮದ ರೈತರ ಜಮೀನಿನಲ್ಲಿ ಹಗಲು ವೇಳೆ ಚಿರತೆ ಕಾಣಿಸಿಕೊಂಡಿದ್ದು, ಇದರಿಂದ ಜನರು ತಮ್ಮ ಹೊಲಗಳಿಗೆ ಹೋಗುವುದಕ್ಕೂ ಹಿಂಜರಿಯುತ್ತಿದ್ದರು. ನಂತರ ಎಚ್ಚೆತ್ತ ಅರಣ್ಯ ಇಲಾಖೆ ಚಿರತೆಯನ್ನು ಸೆರೆಯಿಡಿದಿದ್ದು, ಇದರಿಂದ ಇಲ್ಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಚಿತರೆ ಸೆರೆ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಎಂ.ವೈ.ಚಲವಾದಿ, ಶಿದಪ್ಪ ದೇವಣ್ಣನವರ, ಮಾಂತೇಶ ಮಾಳಗಿ ಭಾಗಿಯಾಗಿದ್ದರು.

ವಿರುಪಸಂದ್ರ ಗ್ರಾಮದಲ್ಲಿ ಪುಂಡಾನೆ ಸೆರೆ
ಇತ್ತೀಚೆಗಷ್ಟೇ ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದಲ್ಲಿ ಮಾವಿನ ತೋಟದ ಕಾವಲುಗಾರನನ್ನು ಪುಂಡಾನೆ ತುಳಿದು ಸಾಯಿಸಿದ್ದು, ಈ ಹಿನ್ನೆಲೆ ಅರಣ್ಯ ಇಲಾಖೆ ಎರಡನೇ ಬಾರಿಗೆ ಪುಂಡಾನೆ ಸೆರೆಯಿಡಿಯಲು ಜೂನ್ 04ರಂದು 5 ಸಾಕನೆಗಳನ್ನು ಬಳಸಿಕೊಂಡು "ಆಪರೇಷನ್ ಪುಂಡಾನೆ ಸೆರೆ" ಕಾರ್ಯಚರಣೆ ಪ್ರಾರಂಭಿಸಿತ್ತು. ಇದೀಗ ಅರಳಾಳುಸಂದ್ರ ಗ್ರಾಮದ ಬಳಿ ಪುಂಡಾನೆಯನ್ನು ಸೆರೆಹಿಡಿಯುವ ಮೂಲಕ ಕಾರ್ಯಾಚರಣೆಯನ್ನು ಯಶ್ವಸಿಗೊಳಿಸಿದ್ದರು.
ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ಬಳಿಯ ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಯನ್ನು ಸೆರೆಹಿಡಿದಿದೆ. ಅರವಳಿಕೆ ಮದ್ದು ನೀಡಿ ಕಾಡಾನೆಯನ್ನು ಸೆರೆಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿದ್ದು, ನಿನ್ನೆ ಕೊನೆಗೂ ಅಭಿಮನ್ಯು ಸೇರಿ 4 ಆನೆಗಳನ್ನು ಬಳಸಿಕೊಂಡು ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.
ಇನ್ನು ಪುಂಡಾನೆ ದಾಳಿಗೆ ಇತ್ತೀಚೆಗಷ್ಟೇ ಇಬ್ಬರು ಅಮಾಯಕರು ಬಲಿಯಾಗಿದ್ದರು. ಆಗಿಂದ ಇಲ್ಲಿನ ಜನರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದರು. ಬಳಿಕ ಎಚ್ಚೆತ್ತ ಇಲಾಖೆ ಪುಂಡಾನೆಯನ್ನು ಬಲೆಗೆ ಕಡವಿದೆ. ಈ ಹಿನ್ನೆಲೆ ಅಲ್ಲಿನ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆಯೇ ಇನ್ನೂ ಉಳಿದಿರುವ 4-5 ಪುಂಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಡಾನೆ ದಾಳಿಗೆ ಅನ್ನದಾತ ಬಲಿ
ಇತ್ತೀಚೆಗಷ್ಟೇ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದ ದೇವರಾಜು ಎಂಬುವವರಿಗೆ ಸೇರಿದ ಮಾವಿನತೋಟದ ಕಾವಲುಗಾರನಾಗಿ ಕೆಲಸ ಮಾಡುತಗತಿದ್ದ ಮುತ್ತರಾಯನಪುರ ಮೂಲದ ವೀರಭದ್ರಯ್ಯ ಎಂಬುವವರನ್ನು ಪುಂಡಾನೆ ದಾಳಿ ಮಾಡಿ ತುಳಿದು ಸಾಯಿಸಿತ್ತು. ಪುಂಡಾನೆ ದಾಳಿಗೆ ರೈತ ಬಲಿಯಾದ ಹಿನ್ನೆಲೆಯಲ್ಲಿ ರೈತರು ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಪುಂಡಾನೆ ಸೆರೆಗೆ ಮುಂದಾಗಿತ್ತು.
ಪುಂಡಾನೆ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲೇ ಹೆಚ್ಚು ಉಪಟಳ ನೀಡುತ್ತಿದ್ದ ಹಿನ್ನೆಲೆ ಮಾವುತರು ಹಾಗೂ ಕಾವಡಿ ಸೇರಿದಂತೆ ಐದು ಸಾಕನೆಗಳು ವಿರುಪಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ ಬಂದಿಳಿದಿದ್ದವು. ಪುಂಡಾನೆ ಸೆರೆಗೆ ಕಾವೇರಿ ವನ್ಯಜೀವಿ ಧಾಮದಿಂದ ಆನೆ ಶಿಬಿರದಿಂದ ಭೀಮ, ಅರ್ಜುನ, ಮಹೇಂದ್ರ, ಶ್ರೀಕಂಠ, ಅಭಿಮನ್ಯು ಆನೆಗಳು ಪುಂಡಾನೆ ಸೆರೆ ಕಾರ್ಯಚರಣೆಗೆ ಬಂದಿದ್ದವು.
ಪುಂಡಾನೆ ಸೆರೆಗೆ ಆಗಮಿಸಿದ ಐದು ಸಾಕನೆಗಳನ್ನು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬರಮಾಡಿಕೊಂಡಿದ್ದರು. ಹಾಗೆಯೇ ನುರಿತ ಸಿಬ್ಬಂದಿಗಳು ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಪುಂಡಾನೆ ಇರುವ ಸ್ಥಳ ಪತ್ತೆ ಹಚ್ಚಿ ಅದರ ಚಲನವಲನದ ಮೇಲೆ ನಿಗಾ ಇಟ್ಟಿದ್ದರು.ಕೊನೆಗೂ ಇಂದು (ಶುಕ್ರವಾರ) ಸಾಕಾನೆಗಳ ಸಹಾಯದಿಂದ ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆಯಿಡಿಯಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಕಳೆದ ವರ್ಷ ಆಗಸ್ಟ್ 13ರಂದು ಪುಂಡಾನೆ ಸೆರೆ ಕಾರ್ಯಚರಣೆಗೆ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್, ಹರ್ಷ, ಲಕ್ಷ್ಮಣ ಹಾಗೂ ಮತ್ತಿಗೋಡು ಆನೆ ಶಿಬಿರದಿಂದ ಮಹಾರಾಷ್ಟ್ರ ಭೀಮ, ಗಣೇಶ ಎಂಬ ಐದು ಸಾಕಾನೆಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು , ಸಿಬ್ಬಂದಿಗಳು, ಮಾವುತರು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ನಡೆಸಿ ಎರಡು ಪುಂಡಾನೆಗಳನ್ನು ಸೆರೆಯಿಡಲಾಗಿತ್ತು. ಆಗ ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚವಾಗಿತ್ತು.
ಸೆರೆಯಿಡಿಯಲು ಮುಂದಾಗಿದ್ದ ಪುಂಡಾನೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಬೇರೆ ಕಡೆಯ ಅರಣ್ಯಕ್ಕೆ ಬಿಡಲಾಗಿತ್ತು. ಆದರೆ ಅದೇ ಪುಂಡಾನೆ ಮತ್ತೆ ಮರಳಿ ಜಿಲ್ಲೆಗೆ ಬಂದಿತ್ತು. ರೆಡಿಯೋ ಕಾಲರ್ ಸಹಕಾರದಿಂದ ಇದು ಮಖ್ನಾ ಆನೆ ಎಂಬುದು ದೃಢಪಟ್ಟಿತ್ತು.
ಇನ್ನು ಕಾಡಾನೆಗಳನ್ನು ಸೆರೆಹಿಡಿದು ಬೇರೆ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬಿಡಲಾಗುತ್ತದೆ. ನಂತರ ಆನೆಗಳು ಮರಳಿ ತಮ್ಮ ಸ್ವಸ್ಥಾನಕ್ಕೆ ಮರಳಲು ಪ್ರಯತ್ನಿಸುವುದು ಸಾಮಾನ್ಯವಾಗಿರುತ್ತದೆ. ಆದರೆ, ಈ ಪ್ರಯತ್ನದಲ್ಲಿ ಎಲ್ಲ ಆನೆಗಳು ಸಫಲ ಆಗುವುದಿಲ್ಲ. ಮರಳುವ ಯತ್ನದಲ್ಲಿ ಕೆಲವು ಆನೆಗಳು ದಾರಿ ತಪ್ಪಿದರೆ, ಇನ್ನು ಕೆಲವು ಆನೆಗಳು ಸಾವನ್ನಪುತ್ತವೆ. ಆದರೆ ಚುರುಕು ಬುದ್ಧಿಯ ಆನೆಗಳು ಮಾತ್ರ ಎಷ್ಟೇ ಅಡೆತಡೆ ಎದುರಾದರೂ ತಮ್ಮ ಸ್ವಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗುತ್ತವೆ ಎಂದು ವನ್ಯಜೀವಿ ಪರಿಣತರು ಹೇಳಿದ್ದರು.












Click it and Unblock the Notifications