BPL-APL Ration Card: ಪಡಿತರ ಚೀಟಿ ರದ್ದು ಬಗ್ಗೆ ಕೇಂದ್ರ ಆಹಾರ ಸಚಿವರು ಹೇಳಿದ್ದೇನು?
ಹುಬ್ಬಳ್ಳಿ, ನವೆಂಬರ್ 17: ರಾಜ್ಯದಲ್ಲಿ ಯಾವ ಕಾರಣಕ್ಕೆ ರೇಷನ್ ಕಾರ್ಡ್ಗಳನ್ನು ರದ್ದುಪಡಿಸುತಿದ್ದಾರೆ. ಯಾರೊಬ್ಬ ಬಡವರಿಗೂ ಇದರಿಂದ ಅನ್ಯಾಯ ಆಗದಂತೆ ಸೂಕ್ತವಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಗ್ಯಾರಂಟಿ ಯೋಜನೆ ನಿಭಾಯಿಸಲು ಆಗದ ಕಾಂಗ್ರೆಸ್ ಸರ್ಕಾರವು ಅದೇ ಕಾರಣಕ್ಕೆ ಅನೇಕ APL, BPL ಪಡಿತರ ಚೀಟಿಗಳನ್ನು ರದ್ದುಪಡಿಸುತ್ತಿರಬಹುದು ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಎಪಿಎಲ್, ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದೆ. ಯಾವ ಕಾರಣಕ್ಕೆ ಹೀಗಾಗುತ್ತಿದೆ ಎಂದು ಮಾಹಿತಿ ಪಡೆಯುತ್ತೇನೆ. ರಾಜ್ಯ ಆಹಾರ ಸರಬರಾಜು ಖಾತೆ ಸಚಿವ ಮುನಿಯಪ್ಪ ಅವರ ಜೊತೆಗೆ ಚರ್ಚಿಸುವೆ ಎಂದರು.

ಈಗಾಗಲೇ ಕೇಂದ್ರ ಸರ್ಕಾರವು ಬಡವರಿಗಾಗಿ 5 ಕೆಜಿ ಉಚಿತ ಅಕ್ಕಿ ನೀಡುತ್ತಿದೆ. ಜನರಿಗೆ ಬಹು ದೊಡ್ಡ ಮಟ್ಟದಲ್ಲಿ ಆಹಾರ ಭದ್ರತೆಯನ್ನು ಕೇಂದ್ರ ಒದಗಿಸುತ್ತಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ. ಅಕ್ಕಿ ನೀಡುತ್ತಿದ್ದೇವೆ. ಅದಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ವರ್ಷ 2 ಲಕ್ಷ 11 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ದೇಶದ ಶೇ.50ರಷ್ಟು ನಗರ ಪ್ರದೇಶದವರಿಗೆ ಮತ್ತು ಶೇ.75ರಷ್ಟು ಗ್ರಾಮೀಣ ಪ್ರದೇಶದ ಜನರಿಗೆ ಉಚಿತವಾಗಿ ಅಕ್ಕಿ ಪೂರೈಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು ಸ್ಥಗಿತ?
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದ ಗ್ಯಾರೆಂಟಿ ಯೋಜನೆಗಳಿಗೆ ಒಂದೊಂದಾಗಿ ಕೊಕ್ಕೆ ಹಾಕಲಾಗುತ್ತದೆ. ಉಚಿತ ಅಕ್ಕಿ ವಿತರಣೆ ಎಂದು ಹೇಳಿದ್ದ ಸರ್ಕಾರ ಈಗ APL, BPL ಕಾರ್ಡ್ ಗಳನ್ನು ರದ್ದುಗೊಳಿಸುತ್ತಿದೆ. ಇದರಿಂದ ಯೋಜನಾ ರಹಿತವಾದ ಗ್ಯಾರಂಟಿ ಯೋಜನೆಗಳನ್ನು ಪೂರೈಸಲಾಗದೇ ಹೀಗೆ ಒಂದೊಂದೇ ಗ್ಯಾರಂಟಿಗಳಿಗೆ ಕೊಕ್ಕೆ ಹಾಕಲಾಗುತ್ತಿದೆ ಎಂದು ಕಂಡು ಬರುತ್ತದೆ ಎಂದು ಅವರು ವ್ಯಂಗ್ಯವಾಡಿದರು.

ಅನ್ನ ಭಾಗ್ಯ ಯೋಜನೆಯಡಿ ಕಾಂಗ್ರೆಸ್ 10 ಕೆ.ಜಿ. ಅಕ್ಕಿ ಕೊಡುವುದಾಗಿ ಘೋಷಿಸಿತ್ತು. ಆದರೆ ಇನ್ನೂವರೆಗೂ ಕೊಟ್ಟಿಲ್ಲ. ನಾವು ನೀಡುವ 5 ಕೆ.ಜಿ.ಅಕ್ಕಿಯನ್ನೇ ನೀಡುತ್ತಿದೆ. ಹೇಳಿದಂತೆ ಬಾಕಿ ಐದು ಕೆ.ಜಿ. ಅಕ್ಕಿ ದುಡ್ಡು ಸಹ ಎಲ್ಲಿರಿಗೂ ಹಾಕಿಲ್ಲ ಎಂದು ಅವರು ದೂರಿದರು.
ವಿವಿಧ ಮಾರ್ಗಗಳಲ್ಲಿ ಬಸ್ ಸಂಚಾರ ಬಂದ್
ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದಲ್ಲಿ ವಿವಿಧ ಕಡೆಗಳಲ್ಲಿ ಸಾರಿಗೆ ಬಸ್ ಗಳೇ ಸಂಚರಿಸುತ್ತಿಲ್ಲ. ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಚಾಲಕ, ನಿರ್ವಾಹಕರಿಗೆ ಸಂಬಳ ಸಹ ಸರಿಯಾಗಿ ನೀಡುತ್ತಿಲ್ಲ ಎಂದು ಅವರು ಕುಟುಕಿದರು.
ಮತ್ತೊಂದು ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಮಾಸಿಕ 2000 ರೂಪಾಯಿ ಹಣ ಅನೇಕ ಮಹಿಳೆಯರಿಗೆ ತಲುಪುತ್ತಿಲ್ಲ. ನಿರುದ್ಯೋಗಿಗಳ ಖಾತೆಗೆ ಯುವ ನಿಧಿ ಪಾವತಿಯಾಗಿಲ್ಲ. ಸರ್ಕಾರ ಬಂದ ಬಳಿಕ ಬೆಲೆ ಏರಿಕೆ ಬಿಸಿಯೇ ಗ್ಯಾರೆಂಟಿ ಸಿಕ್ಕಂತಾಗಿದೆ. ಗೃಹ ಜ್ಯೋತಿ ಕೊಟ್ಟರೆ ವಿದ್ಯುತ್ ಶುಲ್ಕ7 ರೂ.ಗೆ ಏರಿಸಲಾಯಿತು.
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಯಿತು. ಹಾಲು, ಮದ್ಯದ ಬೆಲೆ ಹೆಚ್ಚಿಸಿದರು. ಕಾಂಗ್ರೆಸ್ ಸರ್ಕಾರದಿಂದ ಮುದ್ರಾಂಕ ಶುಲ್ಕ ಹೆಚ್ಚಿಸಲಾಯಿತು ಎಂದು ಕಾಂಗ್ರೆಸ್ ಹಾಗೂ ಗ್ಯಾರಂಟಿ ಯೋಜನೆಗಳ ವಿರುದ್ಧ ವಾಗ್ದಾಲಿ ನಡೆಸಿದರು.











Click it and Unblock the Notifications