ಬಿಜೆಪಿಗೆ ಮತ್ತೊಂದು ಆಘಾತ: ಕುಂದಗೋಳ ಟಿಕೆಟ್ ಆಕಾಂಕ್ಷಿ ಚಿಕ್ಕನಗೌಡರ ಬಂಡಾಯ, ಪಕ್ಷೇತರ ಸ್ಪರ್ಧೆ ನಿರ್ಧಾರ
ಹುಬ್ಬಳ್ಳಿ, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಟೀಕೆಟ್ ಘೋಷಣೆ ಸಿಗದವರು ಬಂಡಾಯ ಏಳುವುದು, ಪಕ್ಷೇತರವಾಗಿ ಸ್ಪರ್ಧಿಸುವುದು ಮುಂದುವರಿದಿದೆ. ಇದಕ್ಕೆ ಕುಂದಗೋಳ ಕ್ಷೇತ್ರವು ಹೊರತಾಗಿಲ್ಲ.
ಇಲ್ಲಿ ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್.ಐ ಚಿಕ್ಕನಗೌಡರ ಅವರು ತಮ್ಮ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಬೆಂಬಲಿಗರ ಒತ್ತಾಸೆಯಂತೆ ಅವರು ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಅವರೇ ತಿಳಿಸಿದ್ದಾರೆ.

ಕುಂದಗೋಳ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಅವರು. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಈ ಬಾರಿ ಎಂ.ಆರ್.ಪಾಟೀಲ್ ಅವರಿಗೆ ಟಿಕೆಟ್ ನೀಡಿದೆ. ಬಳಿಕ ಎರಡನೇ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ.
ಪಕ್ಷ ಕಟ್ಟಿ ಬೆಳೆಸಿದವರಿಗೆ ಟಿಕೆಟ್ ನೀಡದ ಪಕ್ಷದಲ್ಲಿ ನೀವಿರಬಾರದು ಎಂದು ನನ್ನ ಬೆಂಬಲಿಗರು ಒತ್ತಾಯಿಸಿದ್ದಾರೆ. ಅವರ ಆಶಯದಂತೆಯೇ ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಒಂದು ವೇಳೆ ಜೆಡಿಎಸ್,ಇಲ್ಲವೇ ಕಾಂಗ್ರೆಸ್ ಪಕ್ಷ ಆಹ್ವಾನಿಸಿದರೆ ಅದೇ ಪಕ್ಷದಿಂದಲೇ ಕಣಕ್ಕಿಳಿಯುತ್ತೇನೆ ಎಂದು ಕುಂದಗೋಳ ಟಿಕೆಟ್ ಆಕಾಂಕ್ಷಿ ಎಸ್.ಐ ಚಿಕ್ಕನಗೌಡರ ಹೇಳಿದ್ದಾರೆ.
ಕುಂದಗೋಳ ತಾಲ್ಲೂಕಿನ ಅದರಗುಂಚಿಯ ತಮ್ಮ ನಿವಾಸದಲ್ಲಿ ಬುಧವಾರ ತಮ್ಮ ಬೆಂಬಲಿಗರ ಜೊತೆ ಮಹತ್ವದ ಸಭೆ ನಡೆಸಿದರು. ಈ ವೇಳೆ ಅವರ ಬೆಂಬಲಿಗರು ಒಂದಷ್ಟು ಸಲಹೆ ನೀಡಿದ್ದಾರೆ. ಬಳಿಕ ಅವರು ಪಕ್ಷೇತರವಾಗಿ ಸ್ಪರ್ಧೆ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ. ಈ ಸಂಬಂಧ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಬರೆದಿದ್ದಾರೆ.

ಟಿಕೆಟ್ ಕೈತಪ್ಪಿತು: ಪ್ರಹ್ಲಾದ್ ಜೋಶಿ ವಿರುದ್ಧ ವಾಗ್ದಾಳಿ
ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಸಮೀಕ್ಷೆಯಲ್ಲಿ ಚಿಕ್ಕನಗೌಡರ ಅವರ ಪರ ಅಲೆ ಇದೆ ಎಂದು ಮುಖಂಡರು ಹೇಳುತ್ತಲೇ ಬಂದಿದ್ದರು. ನನಗೆ ಮತ್ತೆ ಟಿಕೆಟ್ ಕೊಡುವುದಾಗಿಯೂ ಅವರು ಭರವಸೆ ನೀಡಿದ್ದರು. ಆದರೆ ಕೊನೆ ಹಂತದಲ್ಲಿ ಒಬ್ಬ ಮಹಾನ್ ನಾಯಕರು ನನಗೆ ಟಿಕೆಟ್ ಕೈ ತಪ್ಪುವಂತೆ ಮಾಡಿದರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಹರಿಹಾಯ್ದರು.
ಕುಂದಗೋಳದಿಂದ ಇದುವರೆಗೆ ಸತತವಾಗಿ ಏಳು ಬಾರಿ ಚುನಾವಣೆ ಎದುರಿಸಿದ್ದೇನೆ. ಅದರಲ್ಲಿ 03 ಬಾರಿ ಆಯ್ಕೆಯಾಗಿದ್ದೇನೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುಣಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಅಲ್ಲದೇ ಬಿಜೆಪಿಗೆ ಯಾವೊಂದು ಕಪ್ಪುಚುಕ್ಕೆ ಬಾರದದಂತೆ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದರು.
ಒಪ್ಪಿದರೆ ಬೇರೆ ಪಕ್ಷಗಳಿಂದಲೂ ಸ್ಪರ್ಧೆ
ಬಿಜೆಪಿಯು ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದಕ್ಕು ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಆದರೆ ನಾನು ಏನನ್ನು ತಿಳಿಸಿರಲಿಲ್ಲ. ಅವರು ತಮ್ಮ ಪಕ್ಷಕ್ಕೆ ಬಂದರೆ, ಟಿಕೆಟ್ ಕೊಡುವುದಾಗಿ ತಿಳಿಸಿದ್ದರು. ಬಿಜೆಪಿಯ ಪಟ್ಟಿ ಬಿಡುಗಡೆ ನಂತರ, ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸಲಿದ್ದೇನೆ ಎಂದು ಹೇಳಿದರು.
ಇದೆಲ್ಲ ಬೆಳವಣಿಗೆಗೂ ಮೊದಲು ಕುಂದಗೋಳದ ಟಿಕೆಟ್ ಕೈತಪ್ಪಿದ್ದು, ಚಿಕ್ಕನಗೌಡರ ಅವರಿಗೆ ಟಿಕೆಟ್ ನೀಡದ್ದನ್ನು ವಿರೋಧಿಸಿ ಅವರ ಬೆಂಬಲಿಗರು ಅದರಗುಂಚಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು.
ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕುಸುಮಾವತಿ ಶಿವಳ್ಳಿ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರ ಪರ ಮತ್ತು ವಿರೋಧದ ಮಾತುಗಳು ಕೇಳಿ ಬಂದಿವೆ.












Click it and Unblock the Notifications