ಹುಬ್ಬಳ್ಳಿ ರೈಲ್ವೆ ನಿಲ್ದಾಣ: ದೈನಂದಿನ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ರದ್ದು
ಹುಬ್ಬಳ್ಳಿ, ಮೇ 15: ಹುಬ್ಬಳ್ಳಿಯಿಂದ ಹೊರಡುವ ಕೆಲ ರೈಲುಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ವಿಜಯವಾಡಕ್ಕೆ ಹೊರಡುವ ದೈನಂದಿನ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಆಂಧ್ರಪ್ರದೇಶದ ಗುಂಟೂರು ವಿಭಾಗದ ವ್ಯಾಪ್ತಿಯಲ್ಲಿ ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ನಿಮಿತ್ತ ಹುಬ್ಬಳ್ಳಿ ಹಾಗೂ ವಿಜಯವಾಡ ನಿಲ್ದಾಣಗಳ ನಡುವೆ ಪ್ರತಿ ದಿನ ಸಂಚರಿಸುವ (ಗಾಡಿ ಸಂಖ್ಯೆ 17329/ 17330) ಎಕ್ಸ್ ಪ್ರೆಸ್ ರೈಲುಗಳ ಸಂಚಾರವನ್ನು ಮೇ 16ರಿಂದ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಮಾಹಿತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಇಲಾಖೆಯ ಮುಖ್ಯ ಸಂಪರ್ಕಾಧಿಕಾರಿ ಮಂಜುನಾಥ್ ಕನಮಡಿ ಅವರು, ಯಾವ ರೈಲು ಯಾವ ದಿನ ಸಂಚಾರ ಸ್ಥಗಿತಗೊಳಿಸಲಿದೆ ಎಂಬುದನ್ನು ಅವರು ತಿಳಿಸಿದ್ದಾರೆ.
* ಶ್ರೀ ಸಿದ್ಧರಾರೂಢ ಸ್ವಾಮೀ ಜಂಕ್ಷನ್ ಹುಬ್ಬಳ್ಳಿ ನಿಲ್ದಾಣದಿಂದ ಪ್ರತಿನಿತ್ಯ ವಿಜಯವಾಡಕ್ಕೆ ತೆರಳುತ್ತಿದ್ದ 'ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್ ಪ್ರೆಸ್ ರೈಲು' (ರೈಲು ಸಂಖ್ಯೆ 17329) ನಾಳೆ ಗುರುವಾರ ಮೇ 16 ರಿಂದ 31, 2024 ರವರೆಗೆ ಬರೋಬ್ಬರಿ 15 ದಿನಗಳ ಕಾಲ ತನ್ನ ಸಂಚಾರವನ್ನು ರದ್ದುಗೊಳಿಸಿದೆ.
* ಅದೇ ರೀತಿ ಆಂಧ್ರಪ್ರದೇಶದ ವಿಜಯವಾಡದಿಂದ ಶ್ರೀ ಸಿದ್ಧರಾರೂಢ ಸ್ವಾಮೀ ಜಂಕ್ಷನ್ ಹುಬ್ಬಳ್ಳಿ ನಿಲ್ದಾಣಕ್ಕೆ ಬರುತ್ತಿದ್ದ ದೈನಂದಿನ ವಿಜಯವಾಡ-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 17330) ನಾಡಿದ್ದು, ಮೇ 17ರ ಶುಕ್ರವಾರದಿಂದ ಜೂನ್ 1ರವರೆಗೆ ಎರಡು ವಾರಗಳ ಕಾಲ ತನ್ನ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ಕನಮಡಿ ಅವರು ಹೇಳಿದ್ದಾರೆ.

ರೈಲುಗಳ ಮಾರ್ಗದಲ್ಲಿ ಬದಲಾವಣೆ
ಆಂಧ್ರದ ವಿಜಯವಾಡ ವಲಯದ ಮುಸ್ತಾಬಾದ-ಗನ್ನವರಂ ನಿಲ್ದಾಣಗಳ ಮಧ್ಯ ಹಳಿ ನಿರ್ವಹಣಾ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ವಿಜಯವಾಡ ರೈಲು ಸಂಚಾರ ಸ್ಥಗಿತ ಜೊತೆಗೆ ಒಂದಷ್ಟು ರೈಲುಗಳ ಮಾರ್ಗದಲ್ಲಿ ಬದಲಾವಣೆ ಆಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಮಾಹಿತಿ ಕೊಟ್ಟಿದೆ.
* ಮೇ 21 ಮತ್ತು 28 ರಂದು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು (ಸಂಖ್ಯೆ 06521) ಎಸ್ಎಂವಿಟಿ ಬೆಂಗಳೂರು-ಗುವಾಹಟಿ ವೀಕ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲು ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್ ಹಾಗೂ ನಿಡದವೊಲು ಮಾರ್ಗವಾಗಿ ಸಾಗಲಿದೆ.
* ಅದೇ ರೀತಿ ಮೇ 17 ಮತ್ತು 24 ರಂದು ಗುವಾಹಟಿಯಿಂದ ಬರಲಿರುವ ರೈಲು (ಸಂಖ್ಯೆ 12509) ಗುವಾಹಟಿ-ಎಸ್ಎಂವಿಟಿ ಬೆಂಗಳೂರು ಟ್ರೈ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ನಿಡದವೊಲು, ಭೀಮಾವರಂ ಟೌನ್ ಹಾಗೂ ಗುಡಿವಾಡ, ವಿಜಯವಾಡ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಲಿದ್ದಾರೆ.












Click it and Unblock the Notifications