NWKRTC: ಹುಬ್ಬಳ್ಳಿಯಲ್ಲಿ ನಗರ ಬಸ್ ಸಾರಿಗೆ ಸೇವೆ ಆರಂಭ, ಎಲ್ಲಿಂದ-ಎಲ್ಲಿಗೆ?
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಕೆಂದ್ರವಾಗಿರುವ ಹುಬ್ಬಳ್ಳಿಯು ಅಭಿವೃದ್ಧಿಶೀಲ ನಗರವಾಗಿದೆ. ಇಲ್ಲಿಗೆ ನಿತ್ಯ ಸುತ್ತಮುತ್ತಲಿನ ಭಾಗದ ಜಿಲ್ಲೆಗಳಿಂದ ನಿತ್ಯ ಅಪಾರ ಪ್ರಮಾಣದಲ್ಲಿ ಜನಸಂಚಾರ ಕಂಡು ಬರುತ್ತದೆ. ಬಸ್, ರೈಲುಗಳ ಬಳಕೆ, ವಿಮಾನ ಪ್ರಯಾಣ ಮಾಡುವವರಿದ್ದಾರೆ. ಅವರಿಗೆಲ್ಲ ಅನುಕೂಲವಾಗುವಂತೆ ಹೊಸದಾಗಿ ಮತ್ತೊಮ್ಮೆ ನಗರ ಸಾರಿಗೆ ಬಸ್ ಸೇವೆ ಆರಂಭಿಸಲಾಗಿದೆ. ಇದು ಹುಬ್ಬಳ್ಳಿ ಏರ್‍ಪೋರ್ಟ್‌ನಿಂದ ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು ನಿಲ್ದಾಣವರೆಗೆ ಸೇವೆ ನೀಡಲಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣ - ರೈಲ್ವೆ ನಿಲ್ದಾಣ ನಗರ ಸಾರಿಗೆ ಬಸ್ ಸೇವೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗವು ಇದೇ ಏಪ್ರಿಲ್ 28ರಿಂದ ಆರಂಭಿಸಿದ್ದಾಗಿ ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಏಪ್ರಿಲ್ 28ರಿಂದಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ವಿವಿಧ ಮಾರ್ಗಗಳ ಮೂಲಕ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ನಿರಂತರ ಬಸ್ ಸಂಚಾರ ಸೇವೆ ಲಭ್ಯವಾಗಿದೆ. ಸದ್ಯಕ್ಕೆ ಈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಪ್ರತಿಕ್ರಿಯೆ ನೋಡಿಕೊಂಡು ಅದೇ ಬಸ್‌ಗಳ ಸಂಚಾರ ಖಾಯಂಗೊಳಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಬಸ್ ಮಾರ್ಗ, ವೇಳಾಪಟ್ಟಿ ಹೀಗಿದೆ
ವೇಳಾಪಟ್ಟಿ ನೋಡುವುದಾದರೆ ನಗರ ಸಾರಿಗೆ ಬಸ್‌ಗಳು ಹುಬ್ಬಳ್ಳಿ ವಿಮಾನ ನಿಲ್ದಾಣ ದಿಂದ ಸೆಂಟ್ರಲ್ ಬಸ್ ನಿಲ್ದಾಣ, (ಗೋಕುಲ ರಸ್ತೆ), ಹೊಸೂರು ರಸ್ತೆ, ಹೊಸರೂ ಕ್ರಾಸ್ ಮಾರ್ಗವಾಗಿ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ವೃತ್ತ, ಲ್ಯಾಮಿಂಗ್‌ಟನ್ ಶಾಲೆ ರಸ್ತೆ ಮಾರ್ಗವಾಗಿ ಸಂಚರಿಸಲಿದೆ.
ವಿಮಾನ ನಿಲ್ದಾಣದಿಂದ ನಗರ ಸಾರಿಗೆ ಬಸ್ ಬೆಳಗ್ಗೆ 08:05 ಗಂಟೆಗೆ ಮತ್ತ 11:45ಕ್ಕೆ, ಸಂಜೆ 05:05ಕ್ಕೆ ಮತ್ತು 06:35 ಗಂಟೆ ಹಾಗೂ ರಾತ್ರಿ 07:10ಕ್ಕೆ, 08:05ಗಂಟೆ ಮತ್ತು 08:50ಕ್ಕೆ ಹೊರಡಲಿದೆ. ಈ ವೇಳಾಪಟ್ಟಿ ಹಾಗೂ ಇನ್ನಿತರ ಮಾಹಿತಿ ಕುರಿತು ಪ್ರಯಾಣಿಕರು ಮೊಬೈಲ್ ಸಂಖ್ಯೆ 7760991675 / 96060 30542 ಮತ್ತು 7760991555 ಗೆ ಸಂಪರ್ಕಿಸಬಹುದು. ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.
ದೇಶಿಯ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಏರ್‍ಪೋರ್ಟ್ ಆಗಿ ಮೇಲ್ದರ್ಜೆಗೇರಿಸಬೇಕು. ಅದಕ್ಕೆ ತಕ್ಕ ಸ್ಥಾನ ಮಾನ ಸಿಗಬೇಕೆಂಬ ಬೇಡಿಕೆ ಇದೆ. ಸದ್ಯ ಹುಬ್ಬಳ್ಳಿಯಿಂದ ನಿತ್ಯ ಬೆಂಗಳೂರು, ಹೈದರಾಬಾದ್, ಮುಂಬೈ ಇನ್ನಿತರ ಭಾಗಗಳಿಗೆ ವಿಮಾನಸೇವೆ ಇದೆ. ಏರ್‍ಪೋರ್ಟ್ ಮತ್ತು ರೈಲು ನಿಲ್ದಾನಕ್ಕೆ ತೆರಳುವವರಿಗೆ ಅನುಕೂಲವಾಗಲಿದೆ.
ಏರ್‍ಪೋರ್ಟ್ ಬಸ್ ಸೇವೆ ಧಾರವಾಡಕ್ಕೂ ವಿಸ್ತರಿಸಿ
ಇಂಥದ್ದೆ ನಗರ ಸಾರಿಗೆ ಸೇವೆ ಕಳೆದ 2022ರಲ್ಲಿ ಆರಂಭವಾಗಿ ನಂತರ ಕಾರಣಾಂತರಗಳಿಂದ ನಿಂತಿತ್ತು. ಇದೀಗ ಮತ್ತೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಸಾರ್ವಜನಿಕರು ಈ ಸೇವೆಯನ್ನು ಸ್ವಾಗತಿಸಿದ್ದಾರೆ. ಕೆಲವರು ಹುಬ್ಬಳ್ಳಿ ಏರ್‍ಪೋರ್ಟ್‌ನಿಂದ ಧಾರವಾಡ ಹೊಸ ಬಸ್ ನಿಲ್ದಾಣಕ್ಕೂ ನಗರ ಸಾರಿಗೆ ಬಸ್ ಸೇವೆ ವಿಸ್ತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಇಷ್ಟು ಮಾತ್ರವಲ್ಲದೇ ಹುಬ್ಬಳ್ಳಿ-ಧಾರವಾಡ ಮಧ್ಯ ಇರುವ 'ಚಿಗರಿ ಬಸ್ಸುಗಳನ್ನು, ಹುಬ್ಬಳ್ಳಿ ಏರ್‌ಪೋರ್ಟ್ ವರೆಗೆ ವಿಸ್ತರಿಸಿದರೆ ವಿಮಾನಯಾನಕ್ಕೆ ಮಾತ್ರವಲ್ಲದೇ ನಿತ್ಯ ಈ ಭಾಗಕ್ಕೆ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂಬ ಜನಾಗ್ರಹವು ಕೇಳಿ ಬಂದಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದವರೆಗೆ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಸೇವೆಯನ್ನು ಪ್ರಾರಂಭಿಸಲಾಯಿತು. NWKRTC MD ಶ್ರೀಮತಿ ಪ್ರಿಯಾಂಕಾ ಎಂ. IAS ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕರಾದ ಶ್ರೀ ರೂಪೇಶ್ ಕುಮಾರ್ ರವರು ಬಸ್ ಗೆ ಚಾಲನೆಯನ್ನು ನೀಡಿದರು. pic.twitter.com/776xUFZt7b
— ಹುಬ್ಬಳ್ಳಿ ವಿಮಾನನಿಲ್ದಾಣ: Hubballi Airport (@aaihbxairport) April 28, 2026












Click it and Unblock the Notifications