ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಪೋಸ್ಟ್ ಕೇಸ್: ಮತ್ತೇ ಇಬ್ಬರ ಬಂಧನ, ಇವರ ಕೋಡ್ ಏನು ಗೊತ್ತಾ?
ಹುಬ್ಬಳ್ಳಿ, ಆಗಸ್ಟ್, 12: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಫೋಟೊಗಳನ್ನು ಡೌನ್‌ಲೋಡ್ ಮಾಡಿ, ಬೇರೊಬ್ಬರ ನಗ್ನ ದೇಹ ಚಿತ್ರಗಳಿಗೆ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿನಿಯರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದ ಕಿರಣ್ ಚವನಗೌಡರ ಮತ್ತು ಅವನ ಸ್ನೇಹಿತ ನವೀನ್ ಅಕ್ಕಿ ಬಂಧಿತರು. ಆರೋಪಿಗಳಿಬ್ಬರೂ ತಾಲೂಕಿನ ಇಂಗಳಹಳ್ಳಿ ಗ್ರಾಮದವರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಮೊದಲು ಪೊಲೀಸರು ಅದೇ ಕಾಲೇಜಿನ ರಜನಿಕಾಂತ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಜಾಲತಾಣದ ಅಧಿಕೃತ ಮಾಹಿತಿ ಆಧರಿಸಿ ಸೈಬರ್ ಠಾಣೆ ಪೊಲೀಸರು ಶುಕ್ರವಾರ (ಆಗಸ್ಟ್ 11) ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ರಜನಿಕಾಂತ ಅಲ್ಲ, ಇವರಿಬ್ಬರು ಎನ್ನುವ ಮಾಹಿತಿ ಸ್ಪಷ್ಟವಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಈ ಹಿಂದೆ ಸಂಶಯದ ಹಿನ್ನೆಲೆಯಲ್ಲಿ ವಿಜಯನಗರದ ರಜನಿಕಾಂತ ತಳವಾರ ಎಂಬಾತನನ್ನು ಬಂಧಿಸಿ ನ್ಯಾಯಾಲಯ ವಶಕ್ಕೆ ನೀಡಿದ್ದರು. ನಂತರ 7 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದರು.
ರಜನಿಕಾಂತ್‌ನ ಇ-ಮೇಲ್ ಐಡಿ ಮತ್ತು ಇನ್‌ಸ್ಟಾಗ್ರಾಮ್ ಖಾತೆ ಹಾಗೂ ಸಾಮಾಜಿಕ ಜಾಲತಾಣಗಳ ವಿವರಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಜೊತೆಗೆ, ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಮ್ ಖಾತೆ ವಿವರ ಸಂಗ್ರಹಿಸಿ ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಮಾಹಿತಿ ನೀಡಲು ವಿನಂತಿಸಿದ್ದರು. ಅಲ್ಲಿಂದ ದೊರೆತ ಅಧಿಕೃತ ಮಾಹಿತಿಯೇ ಆರೋಪಿಗಳ ಪತ್ತೆಗೆ ಸಹಕಾರಿಯಾಗಿದೆ.
ಫೇಸ್‌ಬುಕ್ ಸಂಸ್ಥೆಯಿಂದ ಮಾಹಿತಿ ಸಂಗ್ರಹ
ವಿದ್ಯಾರ್ಥಿನಿಯರ ಚಿತ್ರ ಡೌನ್‌ಲೋಡ್ ಮಾಡಿಕೊಂಡು, ಅವುಗಳನ್ನು ಅಶ್ಲೀಲ ಚಿತ್ರಗಳಿಗೆ ಅಂಟಿಸುವ ಪ್ರಕರಣದ ಕುರಿತು ಮುಂಬೈನ ಸೈಬರ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಮಾಹಿತಿ ನೀಡುವಂತೆ ಸೂಚಿಸಿದ್ದರು. ಇಂತಹದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಸೈಬರ್ ಪೊಲೀಸರು ಸಹ ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು ಮಾಹಿತಿಗೆ ವಿನಂತಿಸಿದ್ದರು.
ಈ ಎರಡೂ ಪ್ರಕರಣಗಳಲ್ಲಿ ಕಿರಣ ಚವನಗೌಡನ ಕೈವಾಡ ಇರುವುದು ಫೇಸ್‌ಬುಕ್ ನೀಡಿರುವ ಮಾಹಿತಿಯಿಂದ ತಿಳಿದುಬಂದಿದೆ. ಪ್ರಮುಖ ಆರೋಪಿ ಹಾಗೂ ಹ್ಯಾಕರ್ ಅವನೇ ಆಗಿದ್ದು, ಅವನ ಸ್ನೇಹಿತ ಶಿವಾನಂದ ಅಕ್ಕಿ ಸಹ ಶಾಮೀಲಾಗಿರುವುದು ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹ್ಯಾಕ್ ಮಾಡಲು ಕಾರಣವೇನು?
ಏಳು ವಿದ್ಯಾರ್ಥಿನಿಯರಲ್ಲಿ ಒಬ್ಬ ವಿದ್ಯಾರ್ಥಿನಿ ತನ್ನದೇ ಕಾಲೇಜಿನ ವಿದ್ಯಾರ್ಥಿಯ ಜೊತೆ ಸಲುಗೆಯಿಂದ ಇದ್ದಳು. ಅದನ್ನು ಸಹಿಸದ ನವೀನ್ ಅಕ್ಕಿ, ಮತ್ತೊಂದು ಕಾಲೇಜಿನಲ್ಲಿ ಓದುತ್ತಿದ್ದ ಹ್ಯಾಕರ್ ಕಿರಣ ಚವನಗೌಡ ಸಹಾಯ ಪಡೆದು, ಆ ವಿದ್ಯಾರ್ಥಿನಿಯ ಇನ್‌ಸ್ಟಾಗ್ರಾಮ್ ಖಾತೆ ಹ್ಯಾಕ್ ಮಾಡಿಸುತ್ತಾನೆ. ವಿದ್ಯಾರ್ಥಿನಿಯ ಫೋಟೊಗಳನ್ನು ಅಶ್ಲೀಲ ಚಿತ್ರಗಳಿಗೆ ಜೋಡಿಸಿ ಅದೇ ಖಾತೆಯಲ್ಲಿ ಪೋಸ್ಟ್ ಮಾಡಿಸುತ್ತಾನೆ. ನಂತರ ಪೋಸ್ಟ್ ಅಳಿಸುವುದಾಗಿ ಹೇಳಿ ಅವಳ ಜೊತೆ ಸಲುಗೆ ಬೆಳೆಸಿ, ಕಿರಣನಿಗೆ ಪೋಸ್ಟ್ ಅಳಿಸಲು ಹೇಳುತ್ತಾನೆ.
ಇದರಿಂದ ಕೋಪಗೊಂಡ ಕಿರಣ, ನವೀನ್ ಜೊತೆ ಜಗಳ ಮಾಡುತ್ತಾನೆ. ತನ್ನ ಹೆಸರು ಎಲ್ಲಿಯೂ ಬರಬಾರದು ಎಂದು ದಿಕ್ಕು ತಪ್ಪಿಸಲು "ಪಾಲಿಟಿಕ್ಸ್ + ಪೊಲೀಸ್ + ಸೈಬರ್ ಅರ್ಥ ಮಾಡ್ಕೋರಿ ಲೇ.. ನನ್ನ ಏನ್.... ಮಾಡ್ಲಿಕು ಆಗೋದಿಲ್ಲ" ಎಂದು ಪೋಸ್ಟ್ ಮಾಡಿ ಸವಾಲು ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಅಶ್ಲೀಲ ಚಿತ್ರ ಜೋಡಣೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತದೆ ಎಂದು ಎಸಿಪಿ ಬಾಲಪ್ಪ ನಂದಗಾವಿ ಅವರು ತಿಳಿಸಿದ್ದಾರೆ.











Click it and Unblock the Notifications