ಹುಬ್ಬಳ್ಳಿ-ಧಾರವಾಡಗಳಲ್ಲಿ ಲಘು ರೈಲು ಸಾರಿಗೆ ಯೋಜನೆ: ಬಸ್ಸುಗಳ ರೀತಿ ರೋಡಿನಲ್ಲೇ ಓಡಾಡಲಿವೆ ರೈಲುಗಳು- ಇದು ದೇಶದಲ್ಲೇ ಮೊದಲು
ಹುಬ್ಬಳ್ಳಿ, ಜುಲೈ 17: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಬಸ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (BRTS) ಜೊತೆಗೆ ಲಘು ರೈಲು ಸಾರಿಗೆಯನ್ನು (light rail transit) ಪರಿಚಯಿಸಲು ಸರ್ಕಾರ ಮುಂದಾಗಿದೆ. ಒಂದು ವೇಳೆ, ಈ ಯೋಜನೆಯು ಕಾರ್ಯರೂಪಕ್ಕೆ ಬಂದರೆ, ದೇಶದಲ್ಲೇ ಮೊದಲ ಬಾರಿಗೆ ಲಘು ರೈಲು ಸಾರಿಗೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರಗಳು ಪಡೆಯಲಿವೆ.
ಅವಳಿ ನಗರಗಳಲ್ಲಿ ದಿನೇದಿನೇ ಜನಸಂಖ್ಯೆ ಹೆಚ್ಚುತ್ತಿದೆ. ಜನರಿಗೆ ಉತ್ತಮ ಸಾರಿಗೆ ಸಂಪರ್ಕವನ್ನು ಒದಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿ ಧಾರವಾಡ ರಸ್ತೆಯಲ್ಲಿ ಖಾಸಗಿ ವಾಹನಗಳ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರವು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಲು ಹೆಚ್ಚು ಒತ್ತು ನೀಡುತ್ತಿದೆ.

ಈ ಕುರಿತು ಮಾತನಾಡಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ಲಘು ರೈಲು ಸಾರಿಗೆಯ ಆರಂಭಿಕ ಯೋಜನೆಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ನಾಲ್ಕು ವಾರಗಳಲ್ಲಿ ಪ್ರಸ್ತಾವನೆ ಸಿದ್ಧವಾಗಲಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾಪವಿದೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದೂವರೆ ವರ್ಷದಲ್ಲಿ ಈ ಯೋಜನೆ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
'ಇದು ಆರಂಭಿಕ ಹಂತದಲ್ಲಿದೆ. ನಾನು ಬಿಆರ್‌ಟಿಎಸ್ ಯೋಜನೆಗೆ ವಿರುದ್ಧವಾಗಿಲ್ಲ. ಲಘು ರೈಲು ಸಾರಿಗೆ ಜಾರಿಯಾದಾಗ ಬಿಆರ್‌ಟಿಎಸ್ ಅನ್ನು ನಿಲ್ಲಿಸಲಾಗುವುದಿಲ್ಲ. ಮುಂದಿನ 10 ವರ್ಷಗಳಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರಗಳು ವೇಗವಾಗಿ ವಿಸ್ತಾರಗೊಳ್ಳಲಿವೆ. ಬೆಂಗಳೂರಿನ ನಂತರ ಜನರು ವಾಸ್ತವ್ಯಕ್ಕೆ ಮತ್ತು ಕೈಗಾರಿಕೆಗಳಿಗೆ ಇದು ಮುಂದಿನ ಆಯ್ಕೆಯಾಗಿದೆ. ಆದ್ದರಿಂದ ಮುಂದಿನ 10-20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಅವಳಿ ನಗರಗಳನ್ನು ಅಭಿವೃದ್ಧಿಪಡಿಸಲು ಯೋಚಿಸಬೇಕು. ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಬೇಕು' ಎಂದು ಅವರು ಹೇಳಿದ್ದಾರೆ.

ಲಘು ರೈಲು ಸಂಚಾರಕ್ಕೆ ಸಣ್ಣ ರಾಂಪ್ ಅಗತ್ಯವಿದೆ. ಅಸ್ತಿತ್ವದಲ್ಲಿರುವ ಬಿಆರ್‌ಟಿಎಸ್ ಮೀಸಲಾದ ಕಾರಿಡಾರ್‌ನಲ್ಲಿ ಇದಕ್ಕೆ ಜಾಗವಿದೆ. ಅದನ್ನು ಎಲ್‌ಆರ್‌ಟಿಗೆ ಬಳಸಬಹುದು. ಕಾರ್ಯಸಾಧ್ಯತೆಯ ಅಧ್ಯಯನದ ನಂತರ, ಸರ್ಕಾರವು ಪಿಪಿಪಿ ಮಾದರಿಯಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತದೆ. ಇದು ಹೆಚ್ಚುವರಿ ವ್ಯವಸ್ಥೆಯಾಗಲಿದೆ ಎಂದು ಲಾಡ್ ಹೇಳಿದ್ದಾರೆ.
ಇಲ್ಲಿ ಬಿಆರ್‌ಟಿಎಸ್ ಯೋಜನೆ ಜಾರಿಗೂ ಮುನ್ನ ಹುಬ್ಬಳ್ಳಿ-ಧಾರವಾಡದ ಜನರು ಹಾಗೂ ಹಲವು ಸಂಘಟನೆಗಳು ದಶಕದ ಹಿಂದೆಯೇ ಮೆಟ್ರೊ ಅಥವಾ ಮೊನೊರೈಲು ಯೋಜನೆಗೆ ಬೇಡಿಕೆ ಇಟ್ಟಿದ್ದರು. ಕಡಿಮೆ ಜನಸಂಖ್ಯೆಯ ಕಾರಣ, ಇಲ್ಲಿ ಮೆಟ್ರೊ ಅಥವಾ ಮೊನೊ ರೈಲು ಯೋಜನೆ ಕಾರ್ಯಸಾಧ್ಯವಾಗುವುದಿಲ್ಲ. ಇದು ಇಲ್ಲಿ ದೊಡ್ಡ ಹೂಡಿಕೆಯಾಗಲಿದೆ ಎಂದು ಸಂಸ್ಥೆಗಳು ಸರ್ಕಾರಕ್ಕೆ ವರದಿ ನೀಡಿದ್ದವು. ಹೀಗಾಗಿ ಸರ್ಕಾರ ಇಲ್ಲಿ ಬಿಆರ್‌ಟಿಎಸ್ ಯೋಜನೆಯನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಿದ್ದು ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅವಳಿ ನಗರಗಳ ಜನರು ಸಚಿವರ ಯೋಜನೆಗಳನ್ನು ಸ್ವಾಗತಿಸಿದ್ದಾರೆ. ಅವಳಿ ನಗರಗಳು ವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿವೆ. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಅವಶ್ಯಕತೆಯಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.












Click it and Unblock the Notifications