ಜನರಿಗೆ ಮೂಲ ಸೌಕರ್ಯದ ಚಿಂತೆ ಆದ್ರೆ, ಡೆಪ್ಯೂಟಿ ಮೆಯರ್ ಗೆ ಕಾರಿನ ಚಿಂತೆ!
ಹುಬ್ಬಳ್ಳಿ. ಜುಲೈ 07 : 'ಅಜ್ಜಿಗೆ ಅರಿವೆ ಚಿಂತೆ ಆದರೆ ಮೊಮ್ಮಗಳಿಗೆ ಮದುವೆ ಚಿಂತೆ' ಎನ್ನುವಂತೆ, ಹುಬ್ಬಳ್ಳಿ-ಧಾರವಾಡ ಜನತೆಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ಚಿಂತೆಯಾಗಿದ್ರೆ, ಇಲ್ಲಿನ ಮಹಾನಗರ ಪಾಲಿಕೆಯ ಮೆಯರ್ ಹಾಗೂ ಡೆಪ್ಯೂಟಿ ಮೆಯರ್ ಗೆ ಹೊಸ ಕಾರಿನ ಚಿಂತೆಯಾಗ್ಬಿಟ್ಟಿದೆ....
ಹೌದು, ವಾಹನ ಪದೇ ಪದೇ ಕೈಕೊಡುತ್ತದೆ ಎಂಬ ಕಾರಣಕ್ಕೆ ಮೇಯರ್ ಸಾಮಾನ್ಯ ಸಭೆಯಲ್ಲೇ ಧ್ವನಿ ಎತ್ತಿದ್ದಾಯ್ತು. ಬಸ್, ಆಟೋದಲ್ಲಿ ಪ್ರಯಾಣಿಸಿ ಅಸಮಾಧಾನ ವ್ಯಕ್ತಪಡಿಸಿದ್ದು ಆಯ್ತು. ಆನಂತರ ಮೇಯರ್ ಗೆ ನೂತನ ಕಾರ್ ಬಂದಿದ್ದು ಆಯ್ತು. ಇದೀಗ ಎಲ್ಲೆಂದರಲ್ಲಿ ತಮ್ಮ ಕಾರ್ ಕೈ ಕೊಡುತ್ತಿದ್ದು, ಹೊಸ ಕಾರು ನೀಡಬೇಕು ಇಲ್ಲದಿದ್ದರೆ ತಾವು ಪ್ರತಿಭಟನೆ ಹಾದಿ ಹಿಡಿಯುತ್ತೇವೆ ಎಂದು ಡೆಪ್ಯೂಟಿ ಮೆಯರ್ ಲಕ್ಷ್ಮಿಬಾಯಿ ಬಿಜವಾಡ ಬೆದರಿಕೆ ಹಾಕಿದ್ದಾರೆ.

ಈಗಾಗಲೇ ಎರಡು ಲಕ್ಷ ಕಿ.ಮೀ.ಗೂ ಹೆಚ್ಚು ಕ್ರಮಿಸಿರುವ ಕಾರಿನಲ್ಲೇ ಲಕ್ಷ್ಮಿಬಿಜವಾಡ ನಿತ್ಯ ಓಡಾಡುತ್ತಿದ್ದಾರೆ. ಎಲ್ಲೆಂದರಲ್ಲಿ ದುರಸ್ಥಿಗೆ ಬರುತ್ತಿರುವ ಕಾರಿನಿಂದ ತಾವು ರೋಸಿ ಹೋಗಿದ್ದು, ಪರಿಚಯಸ್ಥರ ಬೈಕ್ ಅಥವಾ ಆಟೋದಲ್ಲಿ ಸಂಚರಿಸುವಂತಾಗಿದೆ ಎಂಬುದು ಅವರ ಅಳಲು. ಇದನ್ನು ಸ್ವತಃ ಉಪ ಮೇಯರ್ ಅವರೇ ಪರಿಷತ್ ಕಾರ್ಯದರ್ಶಿ ಎದುರು ತಮ್ಮ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ.
ನೂತನ ಕಾರಿಗಾಗಿ ಹಿಂದಿನ ಮೇಯರ್ ಆಗಿದ್ದ ಮಂಜುಳಾ ಅಕ್ಕೂರ ಹಲವು ಬಾರಿ ಪ್ರತಿಭಟಿಸಿದ್ದರು. ಹೊಸ ಕಾರು ಖರೀದಿಗೆ ಅನುಮತಿ ನೀಡದ ಆಯುಕ್ತರ ವಿರುದ್ಧವೂ ಕಿಡಿ ಕಾರಿದ್ದರು.
ಈ ಬಗ್ಗೆ ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು-ಪರ ವಿರೋಧ ಚರ್ಚೆಗಳಾಗಿದ್ದವು. ಕೊನೆಗೂ ಮೇಯರ್ ಒತ್ತಡಕ್ಕೆ ಮಣಿದಿದ್ದ ಆಯುಕ್ತರು ಹೊಸ ಕಾರು ಖರೀದಿಗೆ ಅನುಮತಿ ನೀಡಿದ್ದರು.
ಆದರೆ, ಇದೀಗ ಉಪ ಮೇಯರ್ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ಪಡೆದಿರುವ ಕಾರು ಎಲ್ಲೆಂದರಲ್ಲಿ ಕೈಕೊಡುತ್ತಿದೆ. ಇದು ಉಪ ಮೇಯರ್ ಗೆ ಸಿಟ್ಟಿಗೆ ಕಾರಣವಾಗಿದೆ.
"ಹಳೇಯ ಕಾರು ಕೊಟ್ಟಿದ್ದು, ಪದೇ ಪದೇ ಕೈಕೊಡುತ್ತಿದೆ. ಈ ಬಗ್ಗೆ ಹಲವಾರು ಹೇಳಿದರೂ ಗಮನ ಹರಿಸುತ್ತಿಲ್ಲ. ನನಗೂ ಹೊಸ ಕಾರಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ಇದೇ ರೀತಿ ವರ್ತಿಸಿದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ" ಎಂದು ಲಕ್ಷ್ಮಿಬಾಯಿ ಬಿಜವಾಡ ತಿಳಿಸಿದ್ದಾರೆ.












Click it and Unblock the Notifications