ಬಿಜೆಪಿ ನಾಯಕರಿಗೆ ಜಗದೀಶ್ ಶೆಟ್ಟರ್ ಶಾಕ್: ಮಾಜಿ ಸಿಎಂ ಗೆಲ್ಲಿಸಲು ಶಪಥ ಮಾಡಿದ ಲಿಂಗಾಯತ ಮುಖಂಡರು
ರಾಜ್ಯ ರಾಜಕೀಯ ಅಖಾಡ ರಂಗೇರುತ್ತಿದೆ, ಗೆಲುವಿಗಾಗಿ ನಾಯಕರ ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಟಿಕೆಟ್ ಸಿಗದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಸದ್ಯ ಬಿಜೆಪಿಗೆ ದೊಡ್ಡ ತಲೆನೋವಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ.
ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಲು ರಾಷ್ಟ್ರ-ರಾಜ್ಯ ನಾಯಕರೇ ಅಖಾಡಕ್ಕಿಳಿದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಶೆಟ್ಟರ್ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದಾರೆ. ಅದಕ್ಕಾಗಿ ಲಿಂಗಾಯತ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು, ಏನಾದರೂ ಮಾಡಿ ಶೆಟ್ಟರ್ ಅವರನ್ನು ಹಣಿಯುತ್ತೇನೆ, ಮನೆಗೆ ಕಳುಹಿಸಿತ್ತೇನೆ ಎಂದು ಹೇಳಿಕೆ ನೀಡಿದ್ದರು.

ಬಿಜೆಪಿ ನಾಯಕರ ತಂತ್ರಕ್ಕೆ ಜಗದೀಶ್ ಶೆಟ್ಟರ್ ಈಗ ಪ್ರತಿತಂತ್ರ ಹೂಡಿದ್ದು ಶಾಕ್ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕ್ಷೇತ್ರದಲ್ಲಿ ಲಿಂಗಾಯತ ನಾಯಕರ ಸಭೆ ನಡೆಸಿದ್ದು, ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶೆಟ್ಟರ್ ಮಾತಿನಿಂದ ಸಂತುಷ್ಟರಾಗಿರುವ ಲಿಂಗಾಯತ ನಾಯಕರು ಅವರನ್ನು ಗೆಲ್ಲಿಸಲು ಶ್ರಮಿಸುವುದಾಗಿ ಶಪಥ ಮಾಡಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವೀರಶೈವ ಲಿಂಗಾಯತ ಮುಖಂಡರ ಜೊತೆ ಸಭೆ ನಡೆಸಿದ ಜಗದೀಶ್ ಶೆಟ್ಟರ್ ಬಿಜೆಪಿ ತಮಗೆ ಮಾಡಿದ ಅವಮಾನವನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ, ಬಿಜೆಪಿ ಲಿಂಗಾಯತ ಮುಖಂಡರನ್ನು ಕಡೆಗಣಿಸುತ್ತಿದೆ ಎಂದು ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದಕ್ಕೆ ಪಕ್ಷವನ್ನು ತೊರೆದಿರುವುದಾಗಿ ಹೇಳಿದರು. ಮೊದಲಿನಿಂದಲೂ ಲಿಂಗಾಯತ ಸಮುದಾಯ ಜೊತೆಯಲ್ಲಿದ್ದು, ಈ ಬಾರಿ ಕೂಡ ಬೆಂಬಲ ನೀಡುವಂತೆ ಮನವಿ ಮಾಡಿದ್ದು, ಎಲ್ಲಾ ಮುಖಂಡರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.
ವೀರಶೈವ ಲಿಂಗಾಯತ ಹಿರಿಯ ಮುಖಂಡ ಬಂಗಾರೇಶ ಹಿರೇಮಠ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಗದೀಶ್ ಶೆಟ್ಟರ್ ಅವರಿಗೆ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಎಲ್ಲಾ ಲಿಂಗಾಯತ ಮುಖಂಡರು ಒಟ್ಟಾಗಿ ಕೆಲಸ ಮಾಡಿ ಶೆಟ್ಟರ್ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಮತ್ತೊಬ್ಬ ಪ್ರಮುಖ ಮುಖಂಡ ರಾಜಶೇಖರ ಮೆಣಸಿಕಾಯಿ ಮಾತನಾಡಿ, ಬಿಜೆಪಿಯವರ ಬೆದರಿಕೆಗೆ ಯಾರೂ ಭಯಪಡುವ ಅಗತ್ಯವಿಲ್ಲ, ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಸುಮಾರು 200ಕ್ಕೂ ಹೆಚ್ಚು ವೀರಶೈವ ಮುಖಂಡರು ಭಾಗವಹಿಸಿದ್ದರು. ಎಲ್ಲರೂ ಕೂಡ ಜಗದೀಶ್ ಶೆಟ್ಟರ್ ಅವರ ಗೆಲುವಿಗೆ ಕೆಲಸ ಮಾಡುವುದಾಗಿ ಶಪಥ ಮಾಡಿದ್ದಾರೆ. ನಮ್ಮ ಕಷ್ಟಕ್ಕೆ ಸ್ಪಂದಿಸುವ ನಾಯಕನ ಜೊತೆಗೆ ನಾವು ನಿಲ್ಲಬೇಕು ಎಂದು ನಿರ್ಧರಿಸಿದ್ದಾರೆ. ಈ ಮೂಲಕ ಹುಬ್ಬಳ್ಳಿ-ಧಾರವಾಡ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಮತದಾರ ಯಾರ ಜೈ ಹಿಡಿಯುತ್ತಾನೆ ಎನ್ನುವುದು ಮೇ 13ರಂದು ತಿಳಿಯಲಿದೆ.












Click it and Unblock the Notifications