ಹಿರೇಹರಕುಣಿ: ಸ್ಮಶಾನ ಭೂಮಿ ಒತ್ತುವರಿ ಆರೋಪ: ರೊಚ್ಚಿಗೆದ್ದ ಎಸ್‌ಸಿ ಸಮುದಾಯ
ಹಿರೇಹರಕುಣಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಶ್ಮಶಾನ ಭೂಮಿಯನ್ನು ಅತಿಕ್ರಮಣ ಮಾಡಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಮುದಾಯದವರು ಮಾಡಿದ್ದೇನು?
ಧಾರವಾಡ, ಫೆಬ್ರವರಿ, 28: ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಶ್ಮಶಾನ ಭೂಮಿಯನ್ನು ಅದೇ ಗ್ರಾಮದ ಖಾಸಗಿ ವ್ಯಕ್ತಿ ಅತಿಕ್ರಮಣ ಮಾಡಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಪರಿಶಿಷ್ಟ ಜಾತಿ ಸಮುದಾಯದವರೆಲ್ಲ ಒಟ್ಟಾಗಿ ದಿಢೀರ್ ಶ್ಮಶಾನ ಜಮೀನಿನಲ್ಲೇ ಪ್ರತಿಭಟನೆ ನಡೆಸಿದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಜರುಗಿದೆ.
ಸೋಮವಾರ (ಫೆಬ್ರವರಿ 28) ಬೆಳಗಿನ ಅವಧಿಯಲ್ಲಿ ಹಿರೇಹರಕುಣಿ ಗ್ರಾಮದ ಪರಿಶಿಷ್ಟ ಜಾತಿ ಶ್ಮಶಾನ ಜಮೀನಿನಲ್ಲಿನ ಮಣ್ಣಿನ ದಿಬ್ಬವನ್ನು ಅದೇ ಗ್ರಾಮದ ಖಾಸಗಿ ಜಮೀನಿನ ಮಾಲೀಕರು ಒತ್ತುವರಿ ಮಾಡುತ್ತಿದ್ದಾರೆ. ಇದರಿಂದ ಆಕ್ರೋಶ ಗೊಂಡ ಸಮುದಾಯದವರು ನಮ್ಮ ಜಾಗ ನಮಗೆ ಬಿಟ್ಟು ಕೊಡಿ ಎಂದು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಎರಡನೇ ದಿನವೂ ಮುಂದುವರೆದ ಪ್ರತಿಭಟನೆ
ಇನ್ನು ಈ ವಿಷಯ ತಿಳಿದು ಸ್ಥಳಕ್ಕೆ ಕಂದಾಯ ನಿರೀಕ್ಷಕ ಅಶೋಕ್ ಮಲ್ಲೂರು ಭೇಟಿ ನೀಡಿದ್ದು, ಘಟನೆಯ ಸತ್ಯಾಸತ್ಯತೆ ಕುರಿತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳುವ ಮೂಲಕ ಪ್ರತಿಭಟನೆಯನ್ನು ಶಾಂತಗೊಳಿಸಿದ್ದರು. ಆದರೂ ಇಂದು ಎರಡನೇ ದಿನವೂ ಸಹ ಪರಿಶಿಷ್ಟ ಸಮುದಾಯದವರು ಪ್ರತಿಭಟನೆಯನ್ನು ಮುಂದುವರೆದಿದ್ದಾರೆ.
ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಇತ್ಯರ್ಥಮಾಡಬೇಕಿದೆ.

ವಿಮಾನ ನಿಲ್ದಾಣದ ಆವರಣದಲ್ಲಿ ಆಕಸ್ಮಿಕ ಬೆಂಕಿ
ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರಿಗೆ ಆತಂಕವನ್ನುಂಟು ಮಾಡಿದೆ. ಹುಬ್ಬಳ್ಳಿ ಸಾರಿಗೆ ಪ್ರಾದೇಶಿಕ ಕಾರ್ಯಾಗಾರದಲ್ಲಿ ಬೆಂಕಿ ಅವಘಡ ಪ್ರಕರಣ ಮಾಸುವ ಮುನ್ನವೇ ಈ ಘಟನೆ ನಡೆದಿದ್ದು ಕಳವಳ ಸೃಷ್ಟಿಸಿದೆ.
ಬೆಂಕಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಬಾನಂಗಳದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಆಗ್ನಿಸಾಮಕ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಚಾಚರಣೆಯನ್ನು ನಡೆಸಿದ್ದಾರೆ.












Click it and Unblock the Notifications