ನೆಪ ಮಾತ್ರಕ್ಕೆ ನೆರೆ ಹಾನಿ ವೀಕ್ಷಣೆ; ಹುಬ್ಬಳ್ಳಿಯಲ್ಲಿ ಸರ್ಕಾರದ ವಿರುದ್ದ ಕೋನರೆಡ್ಡಿ ಆಕ್ರೋಶ
ಹುಬ್ಬಳ್ಳಿ, ಸೆಪ್ಟೆಂಬರ್, 08: ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ ರೈತರ ಜೀವನವನ್ನೇ ಕಿತ್ತುಕೊಂಡು ಬಿಟ್ಟಿದ್ದಾನೆ. ಭಾರಿ ಮಳೆಯಿಂದ ಬೆಂಗಳೂರಿಗೆ ಎಷ್ಟು ಹಾನಿ ಆಗಿದೆಯೋ, ಅದರ ಎರಡರಷ್ಟು ನವಲಗುಂದ ಕ್ಷೇತ್ರದಲ್ಲಿ ಹಾನಿ ಸಂಭವಿಸಿದೆ. ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಸಂತ್ರಸ್ತರಿಗೆ ಸರ್ಕಾರ ಇನ್ನು ಪರಿಹಾರ ನೀಡುತ್ತಿಲ್ಲ. ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹಾಗಾಗಿ ಪರಿಹಾರ ಕೊಡುವವರೆಗೂ ಟ್ರ್ಯಾಕ್ಟರ್ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಆಕ್ರೋಶ ಹೊರಹಾಕಿದರು.
ಸರ್ಕಾರದ ವಿರುದ್ಧ ಕೋನರೆಡ್ಡಿ ಗುಡುಗು
ನಗರದಲ್ಲಿಂದು ಮಾತನಾಡಿದ ಅವರು, ಪ್ರತಿಭಟನೆ ಮಾಡಿದ ನಂತರ ಸರ್ಕಾರದವರು ಖಾಳಜಿ ಕೇಂದ್ರವನ್ನು ತೆಗೆದಿದ್ದಾರೆ. ಸತ್ಯ ದರ್ಶನ ಮಾಡಲು ಗ್ರಾಮ ವಾಸ್ತವ್ಯ ಮಾಡುತ್ತೇನೆ. ಮನೆ ಕಳೆದುಕೊಂಡವರಿಗೆ ತಕ್ಷಣ ಹತ್ತು ಸಾವಿರ ಪರಿಹಾರ ನೀಡಬೇಕು. ಮನೆ ಕಳೆದುಕೊಂಡವರಿಗೆ ಸರ್ಕಾರ ಇದುವೆಗೂ ಯಾವುದೇ ಪರಿಹಾರವನ್ನೂ ನೀಡಿಲ್ಲ. ಬೆಂಗಳೂರಿನಲ್ಲಿ ಪರಿಹಾರ ನೀಡುತ್ತಿದ್ದಾರೆ. ಆದರೆ ಬೆಂಗಳೂರಿನ ಮೇಲೆ ಇದ್ದಷ್ಟು ಕಾಳಜಿ ಧಾರವಾಡ ಜಿಲ್ಲೆಯ ಜನರ ಮೇಲೆ ಏಕೆ ಇಲ್ಲ? ಹೀಗೆ ಕ್ಷೇತ್ರದ ಜನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕೋನರೆಡ್ಡಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಹಾಲಪ್ಪ ಆಚಾರ್ಯ ಭೇಟಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಅವರು ಜಿಲ್ಲೆಗೆ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ 200ಕ್ಕೂ ಮನೆಗಳು ಸಂಪೂರ್ಣ ಜಲಾವೃತ ಆಗಿವೆ. ಇವತ್ತು ಪರಿಹಾರಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯತೆ ಆಗಿದೆ. ನಾನು ಗ್ರಾಮ ವಾಸ್ತವ್ಯದ ಮೂಲಕ ಹೋರಾಟ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಣ್ಣು ತೆರೆಸುತ್ತೇನೆ. ಪರಿಹಾರ ನೀಡುವವರೆಗೂ ನಿರಂತರವಾಗಿ ಹೋರಾಟ ಮಾಡುತ್ತೇನೆ ಎಂದು ಕೋನರೆಡ್ಡಿ ಪಟ್ಟು ಹಿಡಿದಿದ್ದಾರೆ.

ವರುರ್ಣಾರ್ಭಟಕ್ಕೆ ನಲುಗಿದ ವಾಣಿಜ್ಯ ನಗರಿ
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ನವಲಗುಂದದ ಬಳಿಯ ಹಲವು ಗ್ರಾಮಗಳು ಜಲಾವೃತ ಆಗಿವೆ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಭೋಗಾನೂರ ಗ್ರಾಮದಲ್ಲಿ ದೊಡ್ಡ ಹಂದಿಗನ ಹಳ್ಳವು ತುಂಬಿ ಹರಿದು ಸುಮಾರು 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಮಳೆಯ ಅಬ್ಬರಕ್ಕೆ ಹಂದಿಗನಹಳ್ಳ ತುಂಬಿ ಬಂದಿರುವುದರಿಂದ 40 ಮನೆಯಲ್ಲಿದ್ದ ಜನರು ತಮ್ಮ ರಕ್ಷಣೆಗಾಗಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬಿಟ್ಟು ಹೊರಗೆ ಬಂದಿದ್ದಾರೆ. ನೀರಿನ ಹರಿವು ಇನ್ನು ಹೆಚ್ಚಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ. ಮನೆಗಳನ್ನು ಕಳೆದುಕೊಂಡು ಭೋಗಾನೂರ ಗ್ರಾಮದ 40 ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಆದರೆ ಇದುವರೆಗೂ ಯಾವುದೇ ಅಧಿಕಾರಿಗಳು ಕೂಡ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗುತ್ತಿಲ್ಲ. ಬೆಂಗಳೂರಿಗೆ ಮಾತ್ರ ಪರಿಹಾರವನ್ನು ಕೊಡುತ್ತಿದ್ದಾರೆ. ನಾವು ಏನು ಅನ್ಯಾಯ ಮಾಡಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರುವ ಮೂಲಕ ಅಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ತಗ್ಗದ ಮಳೆರಾಯನ ಅಟ್ಟಹಾಸ
ಎರಡ್ಮೂರು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಹರಿಯುವ ಬೆಣ್ಣೆಹಳ್ಳವು ಪ್ರವಾಹ ಬಂದಿದೆ. ಇದರಿಂದಾಗಿ ಹಳ್ಳದಂಚಿನಲ್ಲಿರುವ ಕಿರೇಸೂರು, ಹೆಬಸೂರು, ಇಂಗಳಹಳ್ಳಿ ಸೇರಿದಂತೆ ಕೆಲ ಗ್ರಾಮಗಳು ಜಲಾವೃತಗೊಂಡಿವೆ.
ಹಳ್ಳ ಉಕ್ಕಿ ಹರಿದಿದ್ದರಿಂದ ಗ್ರಾಮದ ಸುತ್ತಲೂ ನೀರು ಆವರಿಸಿಕೊಂಡು, ಮನೆಗಳಿಗೆ ನೀರು ನುಗ್ಗಿದ್ದು, ಇನ್ನು ಕೆಲವು ಮನೆಗಳ ಗೋಡೆಗಳು ಶಿಥಿಲಗೊಂಡು ಕುಸಿದಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯಲ್ಲಿನ ನೀರನ್ನು ಹೊರಹಾಕಲು ಜನರು ಹರಸಾಹಸ ಪಟ್ಟಿದ್ದಾರೆ. ಹೆಬಸೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಜಲಾವೃತಗೊಂಡಿವೆ.
ಹತ್ತು ಕೊಠಡಿಗಳಿಗೆ ನೀರು ನುಗ್ಗಿದ್ದರಿಂದ ಅಲ್ಲಿದ್ದ ಪುಸ್ತಕಗಳು, ಸಾಮಾಗ್ರಿಗಳು, ಬಿಸಿಯೂಟದ ದಿನಸಿ ಸೇರಿದಂತೆ ವಿವಿಧ ವಸ್ತುಗಳು ನೀರಿನಲ್ಲಿ ಮುಳುಗಿ ಹೋಗಿವೆ. ಪ್ರವಾಹದಿಂದ ಹಾನಿಗೀಡಾದ ಗ್ರಾಮಗಳಿಗೆ ಸಚಿವ ಹಾಗೂ ಸ್ಥಳೀಯ ನವಲಗುಂದ ಕ್ಷೇತ್ರದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ನೀಡಿ ಪರಿಶೀಲಿಸಿದ್ದರು. ಹಾನಿ ಕುರಿತು ಸಮೀಕ್ಷೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.












Click it and Unblock the Notifications