ಸ್ವಾಮೀಜಿ ಎಂಬ ಹೆಸರಿಗೆ ನಿಜವಾದ ಅರ್ಥ ಕಲ್ಪಿಸಿದ ಮಹಾತ್ಮರು ಸಿದ್ದೇಶ್ವರ ಶ್ರೀಗಳು-ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಜನವರಿ 3: ನಡೆದಾಡುವ ದೇವರು ಎಂದು ನಾಮಾಂಕಿತರಾಗಿದ್ದ ಸಿದ್ದೇಶ್ವರ ಶ್ರೀಗಳ ಅಗಲಿಕೆ ಅತೀವ ನೋವನ್ನುಂಟು ಮಾಡಿದೆ. ಸ್ವಾಮೀಜಿ ಎಂಬುವಂತ ಹೆಸರಿಗೆ ನಿಜವಾದ ಅರ್ಥವನ್ನು ಕಲ್ಪಿಸಿದ ಮಹಾತ್ಮರು ಸಿದ್ದೇಶ್ವರ ಶ್ರೀಗಳು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ವಿಜಯಪುರದ ಸಿದ್ದೇಶ್ವರ ಶ್ರೀಗಳ ನಿಧನದ ಹಿನ್ನಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಜಗದೀಶ್ ಶೆಟ್ಟರ್, ನಾಡಿನ ಉದ್ದಗಲಕ್ಕೂ ತಮ್ಮ ಪ್ರವಚನದಿಂದ ಮಾತ್ರವಲ್ಲದೆ ತಮ್ಮ ಜೀವನ ಶೈಲಿಯಿಂದ ಅಪಾರ ಭಕ್ತ ಸಮೂಹವನ್ನು ಹೊಂದಿರುವ ಶ್ರೀಗಳು ಲಿಂಗೈಕ್ಯರಾಗಿರುವುದು ನಿಜಕ್ಕೂ ವೈಯಕ್ತಿಕವಾಗಿ ನನಗೆ ತುಂಬಾ ನೋವುಂಟು ಮಾಡಿದೆ. ರಾಜ್ಯಕ್ಕೆ ಹಾಗೂ ದೇಶಕ್ಕೆ ಮಹಾತ್ಮರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ ಎಂದರು.
ಸಿದ್ದೇಶ್ವರ ಶ್ರೀಗಳ ಪ್ರವಚನ ಅಂದರೆ ಸಾಮನ್ಯವಾಗಿಯೇ ಆಗಿಯೇ ಮೂವತ್ತು ನಲವತ್ತು ಸಾವಿರ ಜನರು ಸೇರುತ್ತಿದ್ದರು. ಅಂತಹ ಮಹಾನ್ ಸಂತರನ್ನು ಪಡೆದಿರುವ ನಾವೆಲ್ಲರೂ ಧನ್ಯರು. ಶ್ರೀಗಳ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ ಇಹಲೋಕ ತ್ಯಜಿಸಿರುವ ಸಂಗತಿ ನಿಜಕ್ಕೂ ಊಹಿಸಲು ಅಸಾಧ್ಯ
ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಾಪ ಸೂಚಿಸಿದ್ದಾರೆ. ನಡೆದಾಡುವ ದೇವರೆಂದೇ ಕರೆಯಲ್ಪಡುವ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿರುವ ಸಂಗತಿ ನಿಜಕ್ಕೂ ಊಹಿಸಲು ಅಸಾಧ್ಯ ಎಂದಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದೆ. ಪ್ರಧಾನಿ ನರೇಂದ್ರ ಮೋದಿಯವರೂ ಸಹ ಸ್ವಾಮೀಜಿಗಳ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದರು. ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟುಹೋಗಿರುವುದು ನಿಜಕ್ಕೂ ಶೋಚನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ದುಃಖ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಗಳು ನೀಡಿರುವ ಜ್ಞಾನದ ಬೆಳಕು, ತೋರಿರುವ ಹಾದಿ ನಮಗೆಲ್ಲಾ ಸಾರ್ಥಕ ಬದುಕು ನಡೆಸಲು ಪ್ರೇರಕ ಶಕ್ತಿಯಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ. ಅವರ ದಿವ್ಯಾತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.












Click it and Unblock the Notifications