ಅವಳಿ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ: ಬಿಜೆಪಿ ವಿರುದ್ಧ ಸ್ಥಳೀಯರ ಆಕ್ರೋಶ- ವಿರೋಧ ಪಕ್ಷಗಳಿಗೆ ಇದೇ ಅಸ್ತ್ರ
ಹುಬ್ಬಳ್ಳಿ ಏಪ್ರಿಲ್ 5: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನಪ್ರತಿನಿಧಿಗಳು ಜನರಿಗೆ ಹತ್ತಿರವಾಗುತ್ತಿದ್ದಾರೆ. ಜನಸಾಮಾನ್ಯರ ಬಳಿ ಅತ್ಯಂತ ಆತ್ಮೀಯವಾಗಿ ವರ್ತಿಸಲಾರಂಭಿಸಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಗೆದ್ದರೆ ಸ್ಥಳೀಯ ಸಮಸ್ಯೆಗಳು ನಿವಾರಣೆಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಭರವಸೆಗಳನ್ನೂ ನೀಡುತ್ತಿದ್ದಾರೆ. ಹೀಗಾಗಿ ಮೂಲಭೂತ ಸಮಸ್ಯೆಗಳೇ ಈ ಬಾರಿ ಜನನಾಯಕರಿಗೆ ದೊಡ್ಡ ಸವಾಲಾಗಿವೆ.
ಹುಬ್ಬಳ್ಳಿ-ಧಾರವಾಡದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ನಿರಂತರ ವ್ಯತ್ಯಯ ಉಂಟಾಗಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಇದು ಪ್ರಮುಖ ವಿಷಯವಾಗಿದೆ. ಸಮಸ್ಯೆ ಇರುವ ಕಡೆ ಬಿಜೆಪಿ ಆಡಳಿತ ಇರುವುದರಿಂದ ಇದನ್ನೇ ವಿರೋಧ ಪಕ್ಷಗಳು ಅಸ್ತ್ರವನ್ನಾಗಿಸಿಕೊಂಡಿವೆ. ಚುನಾವಣಾ ಪ್ರಚಾರದಲ್ಲಿ ಪಕ್ಷಗಳು ಈ ಸಮಸ್ಯೆಗೆ ಪರಿಹಾರ ನೀಡುವ ಭರವಸೆಗಳನ್ನು ನೀಡುತ್ತಿವೆ. ಈ ಮೂಲಕ ಮತಬೇಟಿ ಚುರುಕುಗೊಳಿಸಿವೆ.

ಕಾಂಗ್ರೆಸ್, ಎಎಪಿ, ಜೆಡಿಎಸ್, ಎಐಎಂಐಎಂ, ಎಸ್‌ಡಿಪಿಐ ಮತ್ತು ಇತರರು ಆಡಳಿತಾರೂಢ ಬಿಜೆಪಿ ವಿರುದ್ಧ ಹುಬ್ಬಳ್ಳಿ-ಧಾರವಾಡ ಕುಡಿಯುವ ನೀರು ಪೂರೈಕೆ ವೈಫಲ್ಯವನ್ನು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಕಳೆದ ಕೆಲ ತಿಂಗಳಿಂದ ಕುಡಿಯುವ ನೀರು ಪೂರೈಕೆಗೆ ತೀವ್ರ ತೊಂದರೆಯಾಗುತ್ತಿದೆ. ಆಡಳಿತ ಪಕ್ಷದ ಶಾಸಕರ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ.
ಬಿಜೆಪಿ ವಿರುದ್ಧ ಸ್ಥಳೀಯರ ಆಕ್ರೋಶ
ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆಯ ಹಿತಾಸಕ್ತಿಯಿಂದ ಈ ವಿಷಯದತ್ತ ಗಮನ ಹರಿಸುತ್ತಿವೆ. ಎಚ್‌ಡಿಎಂಸಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ, ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರ ಸೇರಿದಂತೆ ಎಚ್‌ಡಿಎಂಸಿಯ ಎಂಟು ವಾರ್ಡ್‌ಗಳ ಶಾಸಕರು ಬಿಜೆಪಿಯವರೇ ಆಗಿದ್ದಾರೆ. ಹೀಗಾಗಿ ಇದರ ಪ್ರಭಾವ ನೇರ ಬಿಜೆಪಿ ಮೇಲೆ ಬೀಳುವ ಸಾಧ್ಯತೆ ಇದೆ.
ಅವಳಿ ನಗರದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಅಲ್ಲದೆ ಬೇರೆ ಬೇರೆ ಪಕ್ಷಗಳು ವಿವಿಧ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‌ಗಳನ್ನು ನೀಡುವ ಮೂಲಕ ಜನರ ವಿಶ್ವಾಸ ಗಳಿಸಲು ಆರಂಭಿಸಿದ್ದಾರೆ.

ಬಿಜೆಪಿ ಆಡಳಿತವಿರುವ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ನಿರಂತರ ಅಡಚಣೆಗಳಿಂದಾಗಿ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ.
ಕೇಶ್ವಾಪುರದಲ್ಲಿ ಬಿಜೆಪಿ ಸದಸ್ಯರೊಬ್ಬರು ಮಾತನಾಡಿ, 'ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದರೂ ವ್ಯವಸ್ಥೆ ಸುಧಾರಿಸಿಲ್ಲ, ಈಗ ಮತ ಕೇಳಲು ಸಾರ್ವಜನಿಕರನ್ನು ಸಂಪರ್ಕಿಸುವುದು ಹೇಗೆ ಎಂಬ ಆತಂಕದಲ್ಲಿದ್ದಾರೆ. ಬೆಳಿಗ್ಗೆ 5 ಗಂಟೆಯಿಂದಲೇ ಜನರು ಕುಡಿಯುವ ನೀರಿಗಾಗಿ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಸ್ತುತ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ" ಎಂದರು.
ಅವಳಿ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ.

'ಬಿಜೆಪಿ ನಾಯಕರು ಮನೆ ಮನೆಗೆ ಪ್ರಚಾರ ಮಾಡುವಾಗ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರವನ್ನು ಹೊಂದಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿಲ್ಲ'' ಎಂದು ಆರೋಪಿಸಿದರು.
ಈ ಹಿಂದೆ ಜಲಮಂಡಳಿ ಅಧಿಕಾರಿಗಳು ಕಡಿಮೆ ಮಳೆಯ ಸಮಯದಲ್ಲಿಯೂ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸುತ್ತಿದ್ದರು. ಅವಳಿ ನಗರದಲ್ಲಿ ಈಗ ಸಾಕಷ್ಟು ನೀರು ಇದ್ದರೂ 10ರಿಂದ 12 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.
ಎಐಎಂಐಎಂ ಧಾರವಾಡ ಜಿಲ್ಲಾಧ್ಯಕ್ಷ ನಜೀರ್ ಹೊನ್ಯಾಲ್ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳು ಸ್ಥಳೀಯ ಸಮಸ್ಯೆಯಾಗಿರುತ್ತವೆ. ನೀರು ಪೂರೈಕೆ ವ್ಯವಸ್ಥೆ ಹೇಗೆ ಹದಗೆಡುತ್ತದೆ, ಅದಕ್ಕೆ ಯಾರು ಹೊಣೆ ಎಂಬ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದರು.
ಹಳೆ ಹುಬ್ಬಳ್ಳಿ ಭಾಗದಲ್ಲಿ 12ರಿಂದ 15 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಅನೇಕ ಕೊಳಚೆ ಪ್ರದೇಶಗಳ ಜನರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಎಚ್‌ಡಿಎಂಸಿ ಮೇಯರ್ ಈರೇಶ್ ಅಂಚಟಗೇರಿ ಮಾತನಾಡಿ, 'ಕುಡಿಯುವ ನೀರು ಪೂರೈಕೆ ಅಧಿಕಾರಿಗಳ ಜತೆ ಸಭೆ ನಡೆಸುವಂತೆ ಎಚ್‌ಡಿಎಂಸಿ ಆಯುಕ್ತರಿಗೆ ತಿಳಿಸಿದ್ದೇನೆ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇದಕ್ಕೆ ಅನುಮತಿ ನೀಡುವಂತೆ ಎಚ್‌ಡಿಎಂಸಿ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ. ನೀರು ಸರಬರಾಜು ವ್ಯವಸ್ಥೆಯು ಕೆಟ್ಟದಾಗಿ ಪರಿಣಾಮ ಬೀರಿದೆ. ಕುಡಿಯುವ ನೀರು ಸರಬರಾಜು ಮಾಡುವಲ್ಲಿ L&T ವಿಫಲವಾಗಿದೆ" ಎಂದರು.











Click it and Unblock the Notifications