ಉ.ಕರ್ನಾಟಕದಲ್ಲಿಯೇ ಮೊದಲ ಪ್ರಯೋಗ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಡಿಜಿಟಲ್ ಲಾಕರ್
ಹುಬ್ಬಳ್ಳಿ, 13: ಹುಬ್ಬಳ್ಳಿ ನಗರದ ಶ್ರೀ ಸಿದ್ಧಾರೂಢ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ 1ರಲ್ಲಿ ಸೇಫ್ಕ್ಲಾಕ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಆರಂಭಿಸಲಾಗಿದೆ. ಉತ್ತರ ಕರ್ನಾಟಕದಲ್ಲಿಯೇ ಮೊದಲ ಡಿಜಿಟಲ್ ಲಾಕರ್ ವ್ಯವಸ್ಥೆಯಿಂದ ಪ್ರಯಾಣಿಕರು ಫುಲ್ ಖುಷಿಯಾಗಿದ್ದಾರೆ.
ಪ್ರತಿನಿತ್ಯ ಸುಮಾರು ಎರಡರಿಂದ ಮೂರು ಲಕ್ಷ ಪ್ರಯಾಣಿಕರು ಬಾಗಲಕೋಟೆ, ವಿಜಯಪುರ, ರಾಯಚೂರು, ಕಾರವಾರ, ಗದಗ ಸೇರಿದಂತೆ ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಾದ ಮಹಾರಾಯ, ಗೋವಾ, ಆಂಧ್ರ ಪ್ರದೇಶಗಳಿಂದ ಪ್ರಯಾಣಿಕರು ಬಂದು ಹೋಗುತ್ತಾರೆ. ಎಮರ್ಜೆನ್ಸಿ ಕೆಲಸಕ್ಕೆಂದು ಬರುವವರ ಸಂಖ್ಯೆಯೇ ಇದರಲ್ಲಿ ಜಾಸ್ತಿ ಆದ್ದರಿಂದ ಪ್ರಯಾಣಿಕರು ಬರುವಾಗ ಬೆಲೆ ಬಾಳುವ ವಸ್ತುಗಳು, ದಾಖಲೆಗಳನ್ನು ತಂದಿರುತ್ತಾರೆ. ಆದರೆ ಅವುಗಳನ್ನು ಎಲ್ಲಿ ಇರಿಸಬೇಕು ಎನ್ನುವ ಆತಂಕ ಇದ್ದೇ ಇರುತ್ತದೆ. ಆದ್ದರಿಂದ ಈಗ ಈ ಡಿಜಿಟಲ್ ಲಾಕರ್ ಅತ್ಯಂತ ಉಪಯುಕ್ತ ಹಾಗೂ ಒಳ್ಳೆಯ ಭದ್ರತೆ ಆಗಿದೆ.

ಈ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯವು ಹೆಚ್ಚಿನ ಭದ್ರತೆಯನ್ನು ಹೊಂದಿರುವ ಐಒಟಿ ಆಧಾರಿತ ಸ್ಮಾರ್ಟ್ಲಾಕರ್ಗಳಾಗಿದ್ದು, ಪ್ರಯಾಣಿಕರು ತಮ್ಮ ಮೊಬೈಲ್ಗೆ ಬರುವ ಒಟಿಪಿ ನಮೂದಿಸಿ ಈ ಲಗೇಜ್ ಲಾಕರ್ಗಳನ್ನು ಬಳಸಬಹುದಾಗಿದೆ.
ಈ ಸ್ಮಾರ್ಟ್ ಲಗೇಜ್ ಲಾಕರ್ಗಳು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿವೆ. ಪ್ರಯಾಣಿಕರು ತಮ್ಮ ಅಗತ್ಯಕ್ಕೆ ಅನುಗುಣವಾದ ಲಾಕರ್‌ಅನ್ನು ಆಯ್ಕೆ ಮಾಡಿಕೊಂಡು, ಡಿಜಿಟಲ್ ವಿಧಾನದ ಮೂಲಕ ಪಾವತಿಸಿ ತಮ್ಮ ಲಗೇಜ್ಗಳನ್ನು ಈ ಲಾಕರ್ಗಳಲ್ಲಿ ಸುರಕ್ಷಿತವಾಗಿ ಇಡಬಹುದು ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ಸೇಫ್ ಕ್ಲಾಕ್ ಸೌಲಭ್ಯವನ್ನು ಕ್ಲಾಕ್ಟೆಕ್ ಸೊಲ್ಯೂಷನ್ಸ್ ಪ್ರೖೆವೇಟ್ ಲಿಮಿಟೆಡ್ ಒದಗಿಸಿದೆ. ಈ ಡಿಜಿಟಲ್ ಕ್ಲಾಕ್ ರೂಮ್ ಗುತ್ತಿಗೆಯನ್ನು ಟಿಕೆಟ್ ದರ ಹೊರತುಪಡಿಸಿದ ಆದಾಯ ಯೋಜನೆ ಯಡಿಯಲ್ಲಿ ನೀಡಲಾಗಿದೆ. ಇದರಿಂದ ರೈಲ್ವೆಗೆ ಆದಾಯ ದೊರೆಯುವುದರ ಜೊತೆಗೆ ಪ್ರಯಾಣಿಕರಿಗೆ ಸುರಕ್ಷಿತ ಮತ್ತ ಡಿಜಿಟಲ್ ಪಾವತಿ ಸೌಲಭ್ಯವನ್ನು ಒಳಗೊಂಡ ಕ್ಲಾಕ್ ರೂಮ್ ಸೇವೆ ದೊರೆಯಲಿದೆ.

ಡಿಜಿಟಲ್ ಲಗೇಜ್ ಲಾಕರ್ ಶುಲ್ಕ ಮತ್ತು ಇದನ್ನು ಹೇಗೆ ಉಪಯೋಗಿಸುವ ಕುರಿತು ಸಹ ನೈರುತ್ಯ ರೈಲ್ವೆ ವಿಭಾಗದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ ಮಾಹಿತಿ ನೀಡುತ್ತಾರೆ. ಮೊದಲೇ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ದರೋಡೆ ಕಳ್ಳತನ ಹಾಗೂ ವಂಚನೆ ಪ್ರಕರಣಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಇಂತಹ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯವು ಬಹಳಷ್ಟು ಅನುಕೂಲವಾಗಿದೆ.












Click it and Unblock the Notifications