ಸಾರ್ವಜನಿಕರಿಂದಲೇ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಮುಂದಾದ ಧಾರವಾಡ ಪೊಲೀಸರು
ಹುಬ್ಬಳ್ಳಿ, ಏಪ್ರಿಲ್ 3: ಅವಳಿನಗರದ ಪ್ರಖ್ಯಾತಿಯಂತೆ ಕುಖ್ಯಾತಿ ಕೂಡ ದಿನದಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಾದಕ ವಸ್ತುಗಳ ಮಾರಾಟ ಒಂದು ಕಡೆಯಾದರೇ. ಬೆಟ್ಟಿಂಗ್ ದಂಧೆ ಅವಳಿನಗರದಲ್ಲಿ ಬೇರು ಬಿಟ್ಟಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗದ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ಬೆಟ್ಟಿಂಗ್ ಕುಳಗಳ ಹೆಡೆಮುರಿ ಕಟ್ಟಲು ಮುಂದಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಅಬ್ಬರ ಇಡೀ ದೇಶದಲ್ಲಿ ಜೋರಾಗಿದೆ. ತಮ್ಮಿಷ್ಟದ ತಂಡ, ನಾಯಕರ ಭರ್ಜರಿ ಆಟ ನೋಡಲು ಒಂದು ವರ್ಗದ ಜನರ ಕಾಯುತ್ತಿದ್ದರೆ, ಮತ್ತೊಂದು ವರ್ಗ ಇದನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಲೂಟಿ ಮಾಡಲು ಹೊಂಚು ಹಾಕಿ ಕುಳಿತಿವೆ. ಅಂತಹ ಕ್ರಿಕೆಟ್ ಬೆಟ್ಟಿಂಗ್ ಕುಳಗಳ ಹೆಡೆಮುರಿ ಕಟ್ಟಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ವಿನೂತನ ಪ್ರಯೋಗಕ್ಕೆ ಮುಂದಾಗಿದೆ.

ಈವರೆಗೂ ಪೊಲೀಸರು ಮಾತ್ರ ಕ್ರಿಕೆಟ್ ಬುಕ್ಕಿಗಳ ಮೇಲೆ ಮತ್ತು ಬೆಟ್ಟಿಂಗ್ ಕುಳಗಳ ಮೇಲೆ ಹದ್ದಿನಕಣ್ಣು ಇರಿಸುತ್ತಿದ್ದರು. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಂದ ಈ ಬಾರಿಯ ಐಪಿಎಲ್ ಸೀಜನ್ ಬಹಳ ಕಾವು ಪಡೆದುಕೊಂಡಿದೆ. ಚುನಾವಣಾ ಕಾರ್ಯದ ಒತ್ತಡದಲ್ಲಿ ಎಲ್ಲೆಡೆ ಗಮನ ಹರಿಸುವುದಕ್ಕೆ ಕಷ್ಟ ಎಂದರಿತ ಹು-ಧಾ ಪೊಲೀಸ್ ಇಲಾಖೆ ಸಾರ್ವಜನಿಕರಿಂದ ಸಹಾಯ, ಸಹಕಾರ ಬಯಸಿದೆ.
ಸಾಮಾಜಿಕ ಜಾಲತಾಣದ ಮೂಲಕ, ಸಾರ್ವಜನಿಕರ ಸಹಕಾರದಿಂದ ಬೆಟ್ಟಿಂಗ್ ಆಡುವವರ ಮಾಹಿತಿಯನ್ನು ಪಡೆದುಕೊಂಡು, ಅವರಿಂದ ದೊಡ್ಡ ದೊಡ್ಡ ಬುಕ್ಕಿಗಳನ್ನು ತಲುಪುವ ಮಾಸ್ಟರ್ ಪ್ಲಾನ್‌ಅನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ. ತಮ್ಮ ಸುತ್ತ ಮುತ್ತ ಯಾರಾದರೂ ಕ್ರಿಕೆಟ್ ಬೆಟಿಂಗ್‌ನಲ್ಲಿ ನಿರತರಾಗಿದ್ದರೆ ಅಂಥವರ ಬಗ್ಗೆ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹರಿಬಿಟ್ಟಿದ್ದಾರೆ.
ಇನ್ನು ನಗರ ಭಾಗಕ್ಕೆ ಸೀಮಿತವಾಗಿದ್ದ ಬೆಟ್ಟಿಂಗ್ ದಂಧೆ ಈಗ ಗ್ರಾಮೀಣ ಭಾಗವನ್ನೂ ಆವರಿಸಿಕೊಂಡಿದೆ. ಪೊಲೀಸರು ಎಷ್ಟೇ ಅಲರ್ಟ್ ಆಗಿದ್ದರೂ, ಹಳೆಯ ಕೆಲ ಬುಕ್ಕಿಗಳು, ಗೋವಾದಲಿ ಕುಳಿತುಕೊಂಡೇ ಆ್ಯಪ್ ಗಳ ಮೂಲಕ ಬೆಟಿಂಗ್ ದಂಧೆ ನಡೆಸುತ್ತಿದ್ದಾರೆ. ಆ್ಯಪ್‌ಗಳ ಮೂಲಕ ದಂಧೆ ನಡೆಸುವವರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ ಎಂದರಿತ ಹು-ಧಾ ಮಹಾನಗರ ಪೊಲೀಸರು ಬೆಟ್ಟಿಂಗ್ ಆಡುವವರ ಮೂಲಕ ದೊಡ್ಡ ದೊಡ್ಡ ಬುಕ್ಕಿಗಳಿಗೆ ಗಾಳ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಏಜೆಂಟರು ಒದಗಿಸುವ ಲೈವ್-ಲೈನ್ ಗುರು, ಕ್ರಿಕೆಟ್ ಮಜ್ಞಾ, ಲೋಟಸ್, ಬೆಟ್-365, ಬೆಟ್ ಮೇಳದಂತಹ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಯುವಕರ ಮೊಬೈಲ್ ಸೇರುತ್ತಿವೆ. ರಮ್ಮಿ ಸರ್ಕಲ್, ಡೀಮ್ ಎಲೆವೆನ್‌ನಂತಹ ಅಂತರಾಷ್ಟ್ರೀಯ ವೆಬ್ ಸೈಟ್‌ಗಳ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟ. ಹೀಗಾಗಿ, ಐಪಿಎಲ್ ಪಂದ್ಯಾವಳಿ ವೇಳೆ ನಾಯಿ ಕೊಡೆಯಂತೆ ಏಳುವ ಆ್ಯಪ್‌ಗಳ ಮೇಲೆ ಸೈಬರ್ ಕ್ರೈಂ ವಿಭಾಗವೂ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಕುಡಿದ ಮತ್ತಿನಲ್ಲಿ ಬಾಲಕನ ಕೊಲೆ
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಾಲಕನ ಕೊಲೆ ಪ್ರಕರಣದ ತನಿಖೆ ನಡೆಸಿದ್ದು, ಆರೋಪಿ ರವಿ ವೆಂಕಟೇಶ ಬಳ್ಳಾರಿ ಎನ್ನುವಾತನನ್ನು ವಶಕ್ಕೆ ಪಡೆದಿದ್ದೇವೆ ಎಂದು ಧಾರವಾಡ-ಹುಬ್ಬಳ್ಳಿ ಡಿಸಿಪಿ ರಾಜೀವ.ಎಂ. ಹೇಳಿದರು.
ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಾಲಕನ ಶವ ಪತ್ತೆಯಾಗಿರುವ ಬೆನ್ನಲ್ಲೇ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಬಾಲಕನ ಮರಣೋತ್ತರ ಪರೀಕ್ಷೆ ಜೊತೆಗೆ ಎಲ್ಲ ರೀತಿಯಲ್ಲಿ ತನಿಖೆ ನಡೆಸಿದ್ದೇವೆ ಎಂದರು.

ಆರೋಪಿ ಕುಡಿದ ಮತ್ತಿನಲ್ಲಿರುವಾಗಲೇ ಬಾಲಕನ ಕೆನ್ನೆಗೆ ಹೊಡೆದಿದ್ದಾನೆ. ಆಗ ಬಾಲಕ ಪ್ರಜ್ಞೆ ತಪ್ಪಿದ್ದು, ಆಗ ಗಾಬರಿಗೊಂಡ ಆರೋಪಿ ರವಿ ಬಳ್ಳಾರಿ ಬಾಲಕನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಅಲ್ಲದೇ ಬೆರಳಚ್ಚು ಸಾಕ್ಷಿ ಪೊಲೀಸರಿಗೆ ಲಭ್ಯವಾಗಬಾರದು ಎಂದು ಆರೋಪಿ ರವಿ ಬಳ್ಳಾರಿ ಬಾಲಕನ ಬಟ್ಟೆ ಬಿಚ್ಚಲು ಮುಂದಾಗಿದ್ದ ಎನ್ನುವ ಮಾಹಿತಿ ತನಿಖೆಯಿಂದ ಲಭ್ಯವಾಗಿದೆ ಎಂದು ತಿಳಿಸಿದರು.
ಇನ್ನು ಗಾರೆ ಕೆಲಸ ಮಾಡಿಕೊಂಡಿದ್ದ ರವಿ ಬಳ್ಳಾರಿ ಬಾಲಕನ ಕೊಲೆ ಮಾಡಿರುವುದು ತನಿಖೆಯ ಮೂಲಕ ತಿಳಿದು, ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ಅಲ್ಲದೇ ಎಲ್ಲ ರೀತಿಯ ದಾಖಲೆಗಳು ಹಾಗೂ ಮೆಡಿಕಲ್ ದಾಖಲಾತಿ ಕೂಡ ಲಭ್ಯವಾಗಿದೆ ಎಂದು ಡಿಸಿಪಿ ರಾಜೀವ.ಎಂ. ತಿಳಿಸಿದರು.












Click it and Unblock the Notifications