ಹುಬ್ಬಳ್ಳಿ- ಧಾರವಾಡದಲ್ಲಿ ಹೆಚ್ಚುತ್ತಿರುವ ಅಪರಾಧ: ಜನರಲ್ಲಿ ಆತಂಕ

By: ಬಸವರಾಜ ಮರಳಿಹಳ್ಳಿ, ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್ 19: ಹಲವು ಕಾರಣಗಳಿಂದ ಖ್ಯಾತಿ ಪಡೆದಿರುವ ಹುಬ್ಬಳ್ಳಿ-ಧಾರವಾಡ ಮಹಾನಗರಗಳು ಇತ್ತೀಚಿಗೆ ಕ್ರೈಂ ಸಿಟಿಗಳಾಗಿ ಪರಿವರ್ತನೆಯಾಗುತ್ತಿವೆಯಾ ? ಹೌದು ಎನ್ನುತ್ತಿವೆ ಪೊಲೀಸ್ ಇಲಾಖೆಯ ಅಂಕಿ- ಅಂಶಗಳು. ತನ್ನ ವಾಣಿಜ್ಯ ವಾಹಿವಾಟುಗಳಿಂದ ದೇಶದ ಗಮನ ಸೆಳೆದಿರುವ ಈ ಛೋಟಾ ಮುಂಬೈ ಖ್ಯಾತಿಯ ಅವಳಿ ನಗರಗಳು ಅಪರಾಧ ಪ್ರಕರಗಳ ಹೆಚ್ಚಳದಿಂದಲೂ ಕುಖ್ಯಾತಿಗೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಕಳೆದ 18 ತಿಂಗಳಲ್ಲಿ ಅವಳಿ ನಗರಗಳ ವ್ಯಾಪ್ತಿಯಲ್ಲಿ 32 ಕೊಲೆ ಪ್ರಕರಣಗಳು ದಾಖಲಾಗಿರುವುದು ಈ ಹಣೆ ಪಟ್ಟಿ ಹಾಗೂ ಆತಂಕಕ್ಕೆ ಕಾರಣವಾಗಿದೆ. ಇವುಗಳಲ್ಲಿ ಮುಖ್ಯವಾಗಿ ಚಿಂತಕ ಪ್ರೊ ಎಂ ಎಂ ಕಲಬುರ್ಗಿ ಹಾಗೂ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಯೋಗಿಶ್‌ಗೌಡ ಪ್ರಕರಣಗಳೂ ಸೇರಿದ್ದು, ಕಲಬುರ್ಗಿ ಪ್ರಕರಣದಲ್ಲಿ ಈವರೆಗೂ ಆರೋಪಿಗಳ ಸುಳಿವು ಸಿಕ್ಕಿಲ್ಲ.

2016ರಲ್ಲಿ 26 ಕೊಲೆ ಪ್ರಕರಣಗಳು ಹಾಗೂ ೫೩ ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿವೆ. 26 ಕೊಲೆ ಪ್ರಕರಣಗಳಲ್ಲಿ ಪೊಲೀಸರು 24 ಪ್ರಕರಣಗಳನ್ನು ಭೇದಿಸಿದ್ದು, ಉಳಿದ ಎರಡು ಪ್ರಕರಣಗಳ ಸುಳಿವು ಈವರೆಗೂ ಸಿಕ್ಕಿಲ್ಲ. ಇನ್ನು 2017ರ ಮೇ ವರೆಗೆ 11 ಕೊಲೆ ಹಾಗೂ 24 ಕೊಲೆಗೆ ಯತ್ನ ಪ್ರಕರಣಗಳು ದಾಖಲಾಗಿದ್ದು, ೯ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Crime rate in Hubballi and Dharwad increasing tremendously

ಮೀಟರ್ ಬಡ್ಡಿ, ಚೀಟಿ, ಬೆಟ್ಟಿಂಗ್ ದಂಧೆ: ಅವಳಿ ನಗರಗಳಲ್ಲಿ ನಡೆಯುತ್ತಿರುವ ಶೇ ೯೦ರಷ್ಟು ಪ್ರಕರಣಗಳಿಗೆ ಮೀಟರ್ ಬಡ್ಡಿ, ಅನಧಿಕೃತ ಚೀಟಿ ವ್ಯವಹಾರ ಹಾಊ ಬೆಟ್ಟಿಂಗ್ ದಂಧೆಗಳೇ ಕಾರಣ ಎಂದು ತಿಳಿದು ಬಂದಿದೆ. ಇನ್ನುಳಿದ ಶೇ. ೧೦ರಷ್ಟು ಪ್ರಕರಣಗಳು ಕೌಟುಂಬಿಕ, ಹಣಕಾಸು ಹಾಗೂ ರಾಜಕೀಯ ಹಿನ್ನೆಲೆ ಹೊಂದಿದ್ದು, ಅಕ್ರಮ ದಂಧೆಗಳಿಗೆ ಕಡಿವಾಣ ಹಾಕದಿವುದೇ ಇದಕ್ಕೆಲ್ಲಾ ಕಾರಣ ಎಂಬ ಆರೋಪ ಹುಬ್ಬಳ್ಳಿ-ಧಾರವಾಡ ಪೊಲೀಸರ ಮೇಲೆ ಬಂದಿದೆ. ಇನ್ನೊಂದು ಮುಖ್ಯ ಅಂಶವೆಂದರೆ ಇಲ್ಲಿ ನಡೆದಿರುವ ಕೊಲೆ ಪ್ರಕರಣಗಳಲ್ಲಿ ಬಾಲಾಪರಾಧಿಗಳೂ ಭಾಗಿಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ವಾರಕ್ಕೆ ಎರಡು ದರೋಡೆ ಪ್ರಕರಣ: ಅಂಕಿ ಅಂಶಗಳ ಪ್ರಕಾರ ಅವಳಿ ನಗರಗಳಲ್ಲಿ ವಾರಕ್ಕೆ ಮೂರು ದರೋಡೆ ಪ್ರಕರಣಗಳು ನಡೆಯುತ್ತಿದ್ದು, ದಾಖಲಾಗುವ ಪ್ರಕರಣಗಳು ಮಾತ್ರ ಬೆರಳೆಣಿಕೆಯಷ್ಟು ಮಾತ್ರ. ಕಳೆದ 18 ತಿಂಗಳಲ್ಲಿ 130ಕ್ಕೂ ಅಧಿಕ ದರೋಡೆ ಪ್ರಕರಣಗಳು ದಾಖಲಾಗಿವೆ. ದಾಖಲಾಗದೇ ಉಳಿದ ಪ್ರಕರಣಗಳು ಸಾಕಷ್ಟಿವೆ.

ಇತ್ತೀಚಿಗೆ ನಗರದ ಹೊರ ವಲಯಗಳ ನಿರ್ಜನ ಪ್ರದೇಶಗಳಲ್ಲಿ ದರೋಡೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಜನರನ್ನು ಅಡ್ಡಗಟ್ಟಿ ಹಣ, ಚಿನ್ನ ಕಿತ್ತುಕೊಳ್ಳುವ ಪ್ರವೃತ್ತಿ ಹೆಚ್ಚಾಗತೊಡಗಿರುವುದು ಜನರನ್ನು ಆತಂಕಕ್ಕಿಡು ಮಾಡಿದೆ.

ಕಾನೂನು ಸುವ್ಯವಸ್ಥೆ ವಿಫಲ: ಈ ಮಧ್ಯೆ ಕೊಲೆ ಪ್ರಕರಣಗಳನ್ನು ಬೇಧಿಸುವ ಮೂಲಕ ಆರೋಪಿಗಳನ್ನು ಬಂಧಿಸುವುದೇ ದೊಡ್ಡ ಸಾಧನೆ ಎಂದು ಪೊಲೀಸರು ಅಂದುಕೊಂಡಿದ್ದಾರೆ. ಆದರೆ, ಕೊಲೆಯಂತಹ ಅಹಿತಕರ ಪ್ರಾಣ ಹಾನಿ ಘಟಕನೆಗಳನ್ನು ತಡೆಯುವಲ್ಲಿ ಇಲಾಖೆ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ.

Crime rate in Hubballi and Dharwad increasing tremendously

ನಾಯಕರ ಆಕ್ರೋಶ: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಗೃಹ ಇಲಾಖೆ ವಿರುದ್ಧ ಕಿಡಿ ಕಾರಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸಿದ್ದರು.

ಕೊಲೆ, ದರೋಡೆ, ಅತ್ಯಾಚಾರದಂತಹ ಪ್ರಕರಣಗಳು ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದು, ಪ್ರಕರಣಗಳನ್ನು ಬೇಧಿಸುವುದು ಪೊಲೀಸರ ಕರ್ತವ್ಯ ಅದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸುವುದು ಅವರ ಮುಖ್ಯ ಕರ್ತವ್ಯ ಎಂದೂ ಅವರು ಪ್ರತಿಪಾದಿಸಿದ್ಧಾರೆ.

ಇತ್ತೀಚೆಗೆ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿ-ಧಾರವಾಡಗಳಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿದ್ಯಾ ಕಾಶಿ ಎಂದು ಖ್ಯಾತಿ ಪಡೆದಿರುವ ಧಾರವಾಡ ಹಾಗೂ ವಾಣಿಜ್ಯ ವ್ಯವಹಾರಕ್ಕೆ ಹೆಸರುವಾಸಿಯಾಗಿರುವ ಹುಬ್ಬಳ್ಳಿಯಲ್ಲಿ ಪದೆ ಪದೇ ಕೊಲೆ ಪ್ರಕರಣಗಳು ನಡೆಯುತ್ತಿರುವುದು ಆತಂಕಕಾರಿ ವಿಷಯ ಎಂದು ಅವರು ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದಾರೆ.

ಪೊಲೀಸರೇನಂತಾರೆ?: ಕಳೆದ ೧೮ ತಿಂಗಳಲ್ಲಿ ನಡೆದಿರುವ ಬಹುತೇಕ ಎಲ್ಲ ಕೊಲೆ ಪ್ರಕರಣಗಳಲ್ಲಿಯೂ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ತಿಳಿಸಿದರು.

ಇನ್ನು ದರೋಡೆ, ಕಳವು, ಅತ್ಯಾಚಾರದಂತಹ ಪ್ರಕರಣಗಳ ಮೇಲೂ ಇಲಾಖೆ ತೀವ್ರ ನಿಗಾ ಇರಿಸಿದ್ದು, ಅವಳಿ ನಗರಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದೂ ಅವರು ಭರವಸೆ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Crime rate has been tremendously increased in Hubli and Dharwad twin cities thus bringing the blemish name as 'chota mumbai'.
Please Wait while comments are loading...