Hubballi: ಸಿಹಿ ಸುದ್ದಿ: ಸಿಎಂ ಶೀಘ್ರವೇ 'ಆಶ್ರಯ ಮನೆಗಳ' ಲೋಕಾರ್ಪಣೆಗೊಳಿಸುವ ಸಾಧ್ಯತೆ?
ಹುಬ್ಬಳ್ಳಿ, ಫೆಬ್ರವರಿ 13: ಕರ್ನಾಟಕದಲ್ಲೂ ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಫೆಬ್ರವರಿ 16ರಂದು ಪ್ರಸಕ್ತ ಸಾಲಿನ ಬಜೆಟ್ 2024 (Karnataka Budget 2024) ಮಂಡಿಸಲಿದ್ದಾರೆ. ಇದೇ ತಿಂಗಳು ಆಶ್ರಯ ಮನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ಸರ್ಕಾರಿ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಸರ್ಕಾರ ಹಸ್ತಾಂತರಿಸುವ ದಿನಾಂಕ ಲಭ್ಯವಾಗಿದೆ. ಕರ್ನಾಟಕದ ಮುಖ್ಯಮಂತ್ರಿಗಳು ಇದೇ ತಿಂಗಳ ಫೆ. 24ರಂದು ಆಶ್ರಯ ಮನೆಗಳ ಲೋಕಾರ್ಪಣೆ ಮಾಡುವ ಮಾಹಿತಿ ಇದೆ ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳಿಗೆ ಶಾಸಕ ಖಡಕ್ ಎಚ್ಚರಿಕೆ
ಶಾಸಕರು ತಮ್ಮ ಗೃಹ ಕಚೇರಿಯಲ್ಲಿ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ವಿವಿಧ ಇಲಾಖೆಗಳ ಜತೆ ಸೋಮವಾರ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು ಈ ಮಾಹಿತಿ ನೀಡಿದರು. ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ಜನರಿಗೆ ಸೌಲಭ್ಯ ಒದಗಿಸುವ ಕಾರ್ಯ ಮಾಡಬೇಕು. ಅದರಲ್ಲೂ ಸ್ಲಮ್ ಪ್ರದೇಶಗಳಲ್ಲಿ ಯಾವುದೇ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯವಹಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಇನ್ನೂ ಮಂಟೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಆಶ್ರಯ ಮನೆಗಳ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಈಗಾಗಲೇ ಅನೇಕಬಾರಿ ಸೂಚಿನೆ ನೀಡಿದ್ದರೂ ಅಧಿಕಾರಿಗಳು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗುತ್ತಲೇ ಇದೆ. ಇನ್ನು ಸಹಿಸಲಾಗದು. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳ ವಿರುದ್ಧವೂ ಸಹ ಕ್ರಮಕೈಗೊಳ್ಳಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು.
ಒಳಚರಂಡಿ ಅಭಿವೃದ್ಧಿಗೆ ರೂ.80 ಕೋಟಿ ಅನುದಾನ
ಪೂರ್ವ ಕ್ಷೇತ್ರದಲ್ಲಿ ಭವಿಷ್ಯದ ಯೋಜನೆ ಇಟ್ಟುಕೊಂಡು ಒಳಚರಂಡಿ ಸಮಸ್ಯೆ ಇನ್ಯಾವತ್ತು ತಲೆದೂರದಂತೆ ದೊಡ್ಡ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಿದ್ಧವಾಗಿದೆ. ಅಂದಾಜು 80 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಾದ್ಯಂತ ಒಳಚರಂಡಿ ವ್ಯವಸ್ಥೆಗೆ ಸರ್ಕಾರ ಅಸ್ತು ಎಂದಿದೆ. ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಒಳಚರಂಡಿ ದುರಸ್ತಿಗೆ ಹೆಚ್ಚಿನ ಒತ್ತು ನೀಡಿ ಯೋಜನೆ ಸಮರ್ಪಕ ಅನುಷ್ಠಾನ ಮತ್ತು ಯಶಸ್ಸಿಗೆ ಶ್ರಮಿಸಬೇಕು ಎಂದು ನಿರ್ದೇಶಿಸಿದರು.
ಹಳೇ ಹುಬ್ಬಳ್ಳಿ ಮಾರುಕಟ್ಟೆ ಅಭಿವೃದ್ಧಿ
ಈ ಹಿಂದೆ ಕೈ ಬಿಡಲಾಗಿದ್ದ ಹಳೆ ದುರ್ಗದಬೈಲ್ ಮಾರುಕಟ್ಟೆ ಅಭಿವೃದ್ಧಿ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರಸ್ತುತ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ.20 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಹೇಳಿದರು.












Click it and Unblock the Notifications