'ಕುಠಾರಸ್ವಾಮಿ' ಎಂದ ಚಂಪಾಗೆ ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ
Recommended Video

ಹುಬ್ಬಳ್ಳಿ, ಜನವರಿ 05: ನಿನ್ನೆ ನಡೆದ ಧಾರವಾಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ಕುಮಾರಸ್ವಾಮಿ ಅವರು 'ಕುಠಾರಸ್ವಾಮಿ' ಎಂದ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ)ರ ವಿರುದ್ಧ ಕುಮಾರಸ್ವಾಮಿ ಇಂದು ಹರಿಹಾಯ್ದಿದ್ದಾರೆ.
ಇಂಗ್ಲಿಷ್ ಶಾಲೆಗಳ ಆರಂಭದ ವಿಷಯದಲ್ಲಿ ಚಂಪಾ ಅವರು ತಮ್ಮ ಮಿತಿ ದಾಟಿ ಮಾತನಾಡಬಾರದು ಎಂದು ಕುಮಾರಸ್ವಾಮಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದಾರೆ.
ಅಷ್ಟು ಮಾತನಾಡುವ ಚಂದ್ರಶೇಖರ ಪಾಟೀಲರ ಮೊಮ್ಮಕ್ಕಳು ಯಾವ ಮಾಧ್ಯಮದ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಟಾಂಗ್ ನೀಡಿರುವ ಕುಮಾರಸ್ವಾಮಿ, ಅವರಿಗಿಂತ ಜೋರಾಗಿ ಮಾತನಾಡಬಲ್ಲೆ ಆದರೆ ಅವರ ಹಂತಕ್ಕೆ ನಾನ್ಯಾಕೆ ಇಳಿಯಲಿ ಎಂದರು.

ನಾಲ್ಕು ವರ್ಷಗಳಲ್ಲಿ 13 ಲಕ್ಷ ಕನ್ನಡ ಶಾಲೆ ವಿದ್ಯಾರ್ಥಿಗಳು ಖಾಸಗಿ ಶಾಲೆ ಸೇರಿದ್ದಾರೆ ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರು ಮಾತನಾಡಿ ಹೇಳಿದ್ದಾರೆ. ಆದರೆ ಹಾಗಾಗಲು ನಾನು ಕಾರಣವೇನು ಎಂದು ಸಮ್ಮೇಳನಾಧ್ಯಕ್ಷರ ಭಾಷಣದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚಂದ್ರಶೇಖರ ಕಂಬಾರರು ಆಗಲೇ ಏಕೆ ಚರ್ಚೆ ಪ್ರಾರಂಭಿಸಲಿಲ್ಲ ಎಂದು ಗುಟುರು ಹಾಕಿರುವ ಕುಮಾರಸ್ವಾಮಿ, ಚಂಪಾ ಅವರು ಯಾರಿಗೂ ಪ್ರಮಾಣ ಪತ್ರಗಳು ನೀಡುವುದು ಬೇಡ, ಕನ್ನಡದ ಬಗ್ಗೆ ಕಾಳಜಿ ಇದ್ದರೆ ಪರಿಹಾರ ಸೂಚಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ನಿನ್ನೆ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಲ್ಲಿ ಮಾತನಾಡಿದ ಚಂಪಾ ಅವರು, 'ಕುಮಾರಸ್ವಾಮಿ ಅವರು ಕನ್ನಡದ ಪಾಲಿಗೆ ಕುಠಾರಸ್ವಾಮಿ ಆಗುವುದು ಬೇಡ' ಎಂದಿದ್ದರು.












Click it and Unblock the Notifications