ಕುಂದಗೋಳ: ಯರೇಬೂದಿಹಾಳದಲ್ಲಿ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಕೆರೆ ಹೂಳೆತ್ತಿದ್ದ ಗ್ರಾಮಸ್ಥರು
ಕುಂದಗೋಳ, ಜೂನ್, 16: ಸರ್ಕಾರದಿಂದ ಅನುದಾನ ಬಾರದ ಕಾರಣ ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿನ ಕೆರೆಯಲ್ಲಿನ ಹೂಳನ್ನು ತೆಗೆಸಲು ಯಾವ ಅಧಿಕಾರಿಗಳು ಸಹ ಮುಂದಾಗಿರಲಿಲ್ಲ. ಆದರೆ ಇದೀಗ ಜನರೇ ಮುಂದೆನಿಂತು ಹೂಳನ್ನು ಎತ್ತುವ ಮೂಲಕ ಈ ಕೆರೆಯ ಉಳಿವಿಗೆ ಮುಂದಾಗಿದ್ದು, ಜನನಾಯಕರನ್ನು ಮುಜುಗರಕ್ಕೀಡಾಗುವಂತೆ ಮಾಡಿದ್ದಾರೆ.
ಕುಂದಗೋಳ ತಾಲೂಕಿನ ಯರೇಬೂದಿಹಾಳ ಗ್ರಾಮದ ಕುಡಿಯುವ ನೀರು ಒದಗಿಸುವ ಕೆರೆಯಲ್ಲಿ ಸ್ವತಃ ಗ್ರಾಮಸ್ಥರೇ ಹೂಳೆತ್ತಿ ಕರೆ ದಡ ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕ ಕೆರೆಗೆ ನೀರು ಆಗಮಿಸುವ ಹಳ್ಳದ ಅಭಿವೃದ್ಧಿಗೆ ಮುಂದಾಗಿದ್ದಾರೆ. ಗ್ರೇಡ್-1 ಗ್ರಾಮ ಪಂಚಾಯಿತಿ ಹಣೆಪಟ್ಟಿ ಹೊತ್ತ ಸರಿಸುಮಾರು 7,000ಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಯರೇಬೂದಿಹಾಳ ಗ್ರಾಮದ ಜನರಿಗೆ ಈ ಕೆರೆ ನೀರು ಮೂಲಾಧಾರವಾಗಿದೆ.

ಊರಿನಲ್ಲಿ ನಳಗಳ ಸಂಪರ್ಕ ಇದ್ದರೂ ಕೆರೆ ಉಳಿವಿಗಾಗಿ ಜನ ಹೊಳೆತ್ತುವ ಕಾಮಗಾರಿ ಕೈಗೊಂಡು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮತ್ತೊಂದೆಡೆ ಇದು ಅಧಿಕಾರಿಗಳು ಮತ್ತು ಜನನಾಯಕರನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ. ಈಗಾಗಲೇ ಹಲವಾರು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದರೂ ಕೆರೆ ಅಭಿವೃದ್ಧಿ ಮಾಡಿರಲಿಲ್ಲ. ಈ ಹಿನ್ನೆಲೆ ಗ್ರಾಮಸ್ಥರೇ ಕೆರೆ ಅಭಿವೃದ್ಧಿಗೆ ಕೈ ಜೋಡಿಸಿದ್ದು, ಮುಂದೊಂದು ದಿನ ಯರೇಬೂದಿಹಾಳ ಕೆರೆಗೆ ಅಮೃತ ಸರೋವರ ಯೋಜನೆ ಒಲಿದು ಬರಲಿ ಎನ್ನುವುದು ಸ್ಥಳೀಯರ ಆಶಯವಾಗಿದೆ.
ಕೆರೆ ನೀರು ಖಾಲಿ ಮಾಡಿಸಿದ ಜನ, ಏಕೆ?
ಮತ್ತೊಂದೆಡೆ ಇದೀಗ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಇದರ ಪರಿಣಾಮ ನೀರಿನ ಅಭಾವ ಎದುರಾಗಿದೆ. ಇದರಿಂದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಎಲ್ಲಿ ನೋಡಿದರೂ ನೀರಿಗಾಗಿ ಹಾಹಾಕಾರ. ಹಲವಾರು ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಇತ್ತೀಚೆಗಷ್ಟೆ ಹುಬ್ಬಳ್ಳಿ ತಾಲೂಕಿನ ಈ ಊರಿನಲ್ಲಿ ಮಾತ್ರ ಜನರು ಕೆರೆ ನೀರು ಖಾಲಿ ಮಾಡಿಸಿದ್ದರು.
ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಕೆರೆಯಲ್ಲಿ ಬಿದ್ದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಆದ್ದರಿಂದ ಇಲ್ಲಿನ ಜನರು ಅಧಿಕಾರಿಗಳು ಬೇಡ ಬೇಡ ಅಂದರೂ ಕೆರೆಯಲ್ಲಿ ನೀರಿರುವುದು ಬೇಡವೇ ಬೇಡ ಎನ್ನುತ್ತಿದ್ದಾರೆ. ಹೀಗೆ ಜನರ ಒತ್ತಡಕ್ಕೆ ಮಣಿದ ಗ್ರಾಮ ಪಂಚಾಯತಿ ಅಧಿಕಾರಿಗಳು ಕೆರೆ ನೀರನ್ನು ಯಂತ್ರಗಳ ಮೂಲಕ ಹೊರಚೆಲ್ಲಿದ್ದರು. 500ಕ್ಕೂ ಹೆಚ್ಚು ಮನೆಗಳಿರುವ 3,500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಉಮಚಗಿಯಲ್ಲಿ ವ್ಯಕ್ತಿಯೋರ್ವನ ಆತ್ಮಹತ್ಯೆಯಿಂದ ಇಂತಹದೊಂದು ನಿರ್ಧಾರಕ್ಕೆ ಜನರು ಮುಂದಾಗಿದ್ದರು.
ಇನ್ನು ಮಲ್ಲಿಗವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಉಮಚಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಸಾಲ ಬಾಧೆ ತಾಳದೆ ಶಂಕರಪ್ಪ ಹುರಳಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದ. ಆತ್ಮಹತ್ಯೆ ಮಾಡಿಕೊಂಡ ನಾಲ್ಕು ದಿನಗಳ ನಂತರ ಕೆರೆಯಲ್ಲಿ ಶವ ತೇಲಿತ್ತು. ಕೊಳೆತ ಸ್ಥಿತಿಯಲ್ಲಿ ಸ್ಥಿತಿಯಲ್ಲಿ ಶವ ಸಿಕ್ಕಿದ್ದರಿಂದ ನೀರು ಕಲುಷಿತಗೊಂಡಿದೆ ಎಂದು ಜನರು ಹೇಳಿದ್ದರು. ಆಗ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನೀರು ಕಲುಷಿತಗೊಂಡಿಲ್ಲ ಅಂದರೂ ಕೇಳದ ಜನ ಕೆರೆ ನೀರನ್ನು ಖಾಲಿ ಮಾಡಿಸುವಂತೆ ಪಟ್ಟುಹಿಡಿದಿದ್ದರು.












Click it and Unblock the Notifications