Breaking; ಹುಬ್ಬಳ್ಳಿ ಗಲಭೆ; ಮೌಲ್ವಿ ವಾಸಿಂ ಪಠಾಣ್ ಬಂಧನ
ಹುಬ್ಬಳ್ಳಿ, ಏಪ್ರಿಲ್ 21; ಹುಬ್ಬಳ್ಳಿಯ ಹಳೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲ್ವಿ ವಾಸಿಂ ಪಠಾಣ್ ಬಂಧಿಸಲಾಗಿದೆ. ಮೌಲ್ವಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು ಬಳಿಕ ಬಂಧಿಸಿದ್ದಾರೆ.
ಗುರುವಾರ ಮಧ್ಯಾಹ್ನ ಮೌಲ್ವಿ ವಾಸಿಂ ಪಠಾಣ್ ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಅದಕ್ಕೂ ಮೊದಲು ಮೌಲ್ವಿ ವಾಸಿಂ ಪಠಾಣ್ ಅಜ್ಞಾತ ಸ್ಥಳದಿಂದ 4 ನಿಮಿಷದ ವಿಡಿಯೋ ಬಿಡುಗಡೆ ಮಾಡಿದ್ದರು.
ಈ ವಿಡಿಯೋ ಬಿಡುಗಡೆಗೊಂಡ ಸುಮಾರು ಮೂರು ಗಂಟೆಯೊಳಗೆ ಪೊಲೀಸರು ಮೌಲ್ವಿ ವಾಸಿಂ ಪಠಾಣ್ ವಶಕ್ಕೆ ಪಡೆದಿದ್ದರು. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಮುಂಬೈನಲ್ಲಿ ಬುಧವಾರ ರಾತ್ರಿಯೇ ಮೌಲ್ವಿ ವಶಕ್ಕೆ ಪಡೆಯಲಾಗಿತ್ತು.

ಕಳೆದ ಶನಿವಾರ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಮೌಲ್ವಿ ವಾಸಿಂ ಪಠಾಣ್ ಎಂದು ಶಂಕಿಸಲಾಗಿದೆ. ಪೊಲೀಸ್ ಠಾಣೆ ಸಮೀಪದಲ್ಲಿಯೇ ನಡೆದ ಗಲಭೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. 12 ಪೊಲೀಸರು ಗಲಭೆಯಲ್ಲಿ ಗಾಯಗೊಂಡಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 115 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಮೌಲ್ವಿ ವಾಸಿಂ ಪಠಾಣ್ ಪ್ರಚೋದನೆಯಿಂದಲೇ ಗಲಭೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಹಿನ್ನಲೆಯಲ್ಲಿ ಗುರುವಾರ ವಿಚಾರಣೆ ಬಳಿಕ ಮೌಲ್ವಿ ಬಂಧಿಸಲಾಗಿದೆ.
ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಅಭಿಷೇಕ್ ಹಿರೇಮಠ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿದ್ದ ಚಿತ್ರ ಒಂದು ಸಮುದಾಯವನ್ನು ಕೆರಳಿಸಿತ್ತು. ವಿದ್ಯಾರ್ಥಿ ಬಂಧಿಸುವಂತೆ ಒತ್ತಾಯಿಸಲು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಗುಂಪು ಸೇರಲಾಗಿತ್ತು, ಈ ಸಂದರ್ಭದಲ್ಲಿ ಗಲಭೆ ನಡೆದಿತ್ತು.












Click it and Unblock the Notifications