ಹುಬ್ಬಳ್ಳಿಯಲ್ಲಿ ಲಿಂಗಾಯಿತ ಸಂಪ್ರದಾಯದಂತೆ ನೆರವೇರಿದ ಚಂದ್ರಶೇಖರ್ ಅಂತ್ಯ ಸಂಸ್ಕಾರ
ಹುಬ್ಬಳ್ಳಿ, ಜುಲೈ, 6: ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹುಬ್ಬಳ್ಳಿಯ ತಮ್ಮ ಸ್ವಂತ ಜಮೀನಿನಲ್ಲಿ ಮಣ್ಣಲ್ಲಿ ಮಣ್ಣಾಗಿದ್ದಾರೆ. ತಾಲೂಕಿನ ಸುಳ್ಳಾ ಗ್ರಾಮದ ಬಳಿಯ ಶಿವಪ್ರಭು ಲೇಔಟಿನಲ್ಲಿರುವ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಬುಧವಾರ ನೆರವೇರಿತು. ಗುರೂಜಿ ಅಣ್ಣನ ಮಗ ಸಂತೋಷ್ ಅಂಗಡಿ ಅಂತಿಮ ವಿಧಿವವಿಧಾನ ನೆರವೇರಿಸಿದರು.
ಗುರೂಜಿ ಮೃತದೇಹಕ್ಕೆ ಪತ್ನಿ ಅಂಕಿತಾ ಅಂತಿಮ ಪೂಜೆ ಸಲ್ಲಿಸಿದರು. ಪಂಚಾಕ್ಷರಿ ಮಂತ್ರದೊಂದಿಗೆ ಅಂತಿಮ ಸಂಸ್ಕಾರ ನೆರವೇರಿತು. 10 ಸ್ವಾಮೀಜಿಗಳು ಅಂತಿಮ ವಿಧಿವಿಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮಂಗಳವಾರ ಹುಬ್ಬಳ್ಳಿಯಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿಯನ್ನು ಅವರ ಸಂಸ್ಥೆಯ ಮಾಜಿ ಉದ್ಯೋಗಿಗಳೇ ಬರ್ಬರವಾಗಿ ಹತ್ಯೆಗೈದಿದ್ದರು. ಸುಮಾರು 42ಕ್ಕೂ ಹೆಚ್ಚು ಬಾರಿ ಚುಚ್ಚಿದ್ದರಿಂದ ಗುರೂಜಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

ಮರುಗಿದ ಪ್ರೀತಿಯ ಶ್ವಾನ:
ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ ಕಾರ್ಯಕ್ರಮದ ವೇಳೆ ಅವರು ಪ್ರೀತಿಯ ಸಾಕಿದ್ದ ಶ್ವಾನ ಪ್ರಿನ್ಸ್ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡಿತು. ಮೃತದೇಹ ಪೆಟ್ಟಿಯ ಮೇಲೆ ಕುಳಿತು ಅಂತಿಮ ದರ್ಶನ ಪಡೆದುಕೊಂಡಿತು. ಹುಟ್ಟೂರು ಬಾಗಲಕೋಟೆ ಸೇರಿ ವಿವಿಧ ಕಡೆಗಳಿಂದ ಸಂಬಂಧಿಕರು ಹಿತೈಶಿಗಳು ಆಗಮಿಸಿ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

42 ಬಾರಿ ಚುಚ್ಚಿ ಕೊಲೆ?
ಚಂದ್ರಶೇಖರ ಗುರೂಜಿ ಅವರಿಗೆ ಹಂತಕರು ಕುತ್ತಿಗೆ ಬಳಿ ಎರಡು ಬಾರಿ 12 ಇಂಚಿನಷ್ಟು ಚುಚ್ಚಿದ್ದು, ಚಾಕು 2-3 ಇಂಚಿನಷ್ಟು ಒಳಗೆ ಹೋಗಿ ಗಾಯವುಂಟಾಗಿದ್ದು, ಇರಿದ ಜಾಗದಲ್ಲೇ 2-3 ಬಾರಿ ಇರಿದಿದ್ದಾರೆ. ಒಟ್ಟು 42 ಕಡೆಗಳಲ್ಲಿ ಇರಿದ ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಆರೋಪಿಗಳಾದ ಮಹಾಂತೇಶ್ ಮತ್ತು ಪತ್ನಿ ಹೆಸರಲ್ಲಿ ಚಂದ್ರಶೇಖರ್ ಗುರೂಜಿ ಆಸ್ತಿ ಮಾಡಿದ್ದು, ಅದನ್ನು ವಾಪಸ್ ತಮ್ಮ ಹೆಸರಿಗೆ ಮಾಡಿಕೊಡಲು ಹೇಳಿದ್ದಕ್ಕೆ ಈ ಕೊಲೆ ನಡೆದಿರಬಹುದು ಎನ್ನಲಾಗಿದೆ.












Click it and Unblock the Notifications