ಜಗದೀಶ್ ಶೆಟ್ಟರ್ ಬಿಜೆಪಿ ಬಿಡುವ ಪ್ರಶ್ನೇಯೇ ಇಲ್ಲ, ಅವರ ಸೇವೆ ಪಕ್ಷಕ್ಕೆ ಅಗತ್ಯ- ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಏಪ್ರಿಲ್ 15: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡುವ ವಿಚಾರ ಕೇಂದ್ರದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಬಿಡುವ ಮಾತೇ ಇಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಜಗದೀಶ್ ಶೆಟ್ಟರ್ ಅವರ ಪಾತ್ರವೂ ಇದೆ. 30 ವರ್ಷಗಳಿಂದ ಜಗದೀಶ್ ಶೆಟ್ಟರ್ ಬಿಜೆಪಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದಾರೆ. ಬಜೆಪಿಗೆ ಶೆಟ್ಟರ್ ಅವರ ಸೇವೆ ಮುಂದೆಯೂ ಅಗತ್ಯವಾಗಿದೆ ಎಂದರು.

ಜಗದೀಶ್ ಶೆಟ್ಟರ್ ಜೊತೆ ಟಿಕೆಟ್ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡಿದ್ದೇನೆ. ಕೇಂದ್ರದ ವರಿಷ್ಠರು ಸಹ ಚರ್ಚೆ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ಶೆಟ್ಟರ್ ಅವರ ಸೇವೆಯ ಅಗತ್ಯತೆಯ ಕುರಿತು ಅವರ ಜೊತೆ ಚರ್ಚಿಸಿದ್ದೇನೆ. ಹೈಕಮಾಂಡ್ ಕೂಡ ಅವರ ಪಕ್ಷ ಸೇವೆಯನ್ನು ಪರಿಗಣಿಸುವ ವಿಶ್ವಾಸವಿದೆ. ಶೆಟ್ಟರ್ ಅವರು ಪಕ್ಷದಲ್ಲಿ ಇರಲಿದ್ದಾರೆ. ಪಕ್ಷ ಬಿಡುವ ಮಾತೇ ಇಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಸುಮಾರು 30 ನಿಮಿಷಗಳ ಕಾಲ ಜಗದೀಶ್ ಶೆಟ್ಟರ್ ಜೊತೆ ಮಾತುಕತೆ ನಡೆಸಿದ ಪ್ರಹ್ಲಾದ್ ಜೋಶಿ ಹೈಕಮಾಂಡ್ ಟಿಕೆಟ್ ನೀಡುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಹೈಮಾಂಡ್ ವಿರುದ್ಧ ರಾಜ್ಯದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ್ ಸವದಿ ಇದೇ ವಿಚಾರಕ್ಕೆ ಬೇಸರಗೊಂಡು ಈಗಾಗಲೇ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಈ ಬೆಳವಣಿಗೆಯ ನಡುವೆಯೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಅಭ್ಯರ್ಥಿಗಳ ಪಟ್ಟಿ ಘೋಷಣೆಯಲ್ಲಿ ತಮ್ಮ ಹೆಸರಿಲ್ಲ ಎನ್ನುವ ಕಾರಣಕ್ಕೆ ತೀವ್ರ ಅಸಮಧಾನಗೊಂಡಿದ್ದು, ಟಿಕೆಟ್ ಘೋಷಿಸಲು ಬಿಜೆಪಿ ನಾಯಕರಿಗೆ ಹೆಡ್‌ಲೈನ್ ನೀಡಿದ್ದಾರೆ. ಹೀಗಾಗಿ ಈ ಆತಂಕದಲ್ಲಿಯೇ ಟಿಕೆಟ್ ಘೋಷಣೆಯಾಗದ ಕಾರಣ ಪಕ್ಷದ ವಿರುದ್ಧ ತಿರುಗಿ ಬಿದ್ದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಮನವೊಲಿಸುವ ಎಲ್ಲಾ ಕೆಲಸಗಳು ನಡೆಯುತ್ತಿವೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ವಿರುದ್ಧದ ರಾಜಕೀಯ ಚಟುವಟಿಕೆಗಳು ಹೆಚ್ಚಾಗುವ ಮೊದಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಮನೆಗೆ ಹೋಗಿರುವ ಅವರು ಸಂಧಾನ ಸಭೆ ನಡೆಸಿದ್ದಾರೆ.
ಜಗದೀಶ್ ಶೆಟ್ಟರ್‌ಗೆ ಟಿಕೆಟ್ ವಿಳಂಬ: ರಾಜೀನಾಮೆ ಸಲ್ಲಿಸಿದ ಪಾಲಿಕೆ ಸದಸ್ಯರು
ಇನ್ನು ರಾಜ್ಯ ವಿಧಾನಸಭಾ ಚುನಾವಣಾಗೆ ಸ್ಪರ್ಧಿಸಲು, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡುವಲ್ಲಿ ವಿಳಂಬ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಬಿಜೆಪಿ ಪಕ್ಷದ 16 ಸದಸ್ಯರು ರಾಜೀನಾಮೆ ಪತ್ರ ಬರೆದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸಲ್ಲಿಸಿದ್ದಾರೆ.












Click it and Unblock the Notifications