ನಾಮಪತ್ರ ಸಲ್ಲಿಸಲು ತೆರಳುವಾಗ ಕುಸಿದುಬಿದ್ದ ಬಂಡಾಯ ಅಭ್ಯರ್ಥಿ ನಿಂಬಣ್ಣವರ್
ಹುಬ್ಬಳ್ಳಿ, ಏಪ್ರಿಲ್ 23 : ಕಲಘಟಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಎಂ. ನಿಂಬಣ್ಣವರ್ ಇಂದು ಸೋಮವಾರ ನಾಮಪತ್ರ ಸಲ್ಲಿಸಲು ತೆರಳುವಾಗ ಕುಸಿದು ಬಿದ್ದಿದ್ದಾರೆ. ನಿಂಬಣ್ಣವರ್ ಬಿಜೆಪಿ ಕಲಘಟಗಿ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರ ಕೈ ತಪ್ಪಿ ಟಿಕೆಟ್ ಮಹೇಶ ಟೆಂಗಿನಕಾಯಿಯವರ ಪಾಲಾಗಿತ್ತು.
ಇದರಿಂದ ಹಲವು ಪ್ರತಿಭಟನೆ ನಡೆಸಿದ ಬೆಂಬಲಿಗರು ನಿಂಬಣ್ಣವರ್ ಅವರನ್ನು ಬಂಡಾಯವಾಗಿ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದ್ದರು. ಬೆಂಬಲಿಗರ ಒತ್ತಾಯಕ್ಕೆ ಮಣಿದ ನಿಂಬಣ್ಣವರ್ ಇಂದು ಕಲಘಟಗಿ ಪಟ್ಟಣದ ಪ್ರಮುಖ ರಸ್ತೆ ಮೂಲಕ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ತೆರಳುತ್ತಿದ್ದರು.

ಆಗ ನಾಮ ಪತ್ರ ಸಲ್ಲಿಸಲು ಹೊರಟ ಚಕ್ಕಡಿಯಲ್ಲಿಯೇ ಕುಸಿದು ಬಿದ್ದರು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಬೆಂಬಲಿಗರು ಪ್ರಥಮ ಚಿಕಿತ್ಸೆ ನೀಡಿದರು. ಘಟನೆಗೆ ಲೋ ಬಿಪಿ ಕಾರಣ ಎನ್ನಲಾಗಿದೆ. ಬಳಿಕ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಾಮಪತ್ರ ಸಲ್ಲಿಸಿದರು.
ಕಳೆದೆರೆಡು ದಿನಗಳ ಹಿಂದೆಯಷ್ಟೆ, ಬಿಜೆಪಿ ಟಿಕೆಟ್ ಸಿಗದಂತೆ ನನಗೆ ಸ್ಥಳೀಯ ನಾಯಕರೇ ಮೋಸ ಮಾಡಿದ್ದಾರೆ. ಹೀಗಾಗಿ ಸೂಕ್ತ ದಾಖಲೆ ಬಿಡುಗಡೆ ಮಾಡುತ್ತೇನೆ. ಆದರೆ, ನಾನು ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.












Click it and Unblock the Notifications