Murder In Dharwad: ಧಾರವಾಡದಲ್ಲಿ ಬಿಜೆಪಿ ಯವ ಮುಖಂಡನ ಹತ್ಯೆ: ಅಂತಿಮ ದರ್ಶನ ಪಡೆದ ಪ್ರಹ್ಲಾದ್ ಜೋಶಿ
ಧಾರವಾಡ, ಏಪ್ರಿಲ್ 19: ಬಿಜೆಪಿ ಧಾರವಾಡ ಜಿಲ್ಲಾ ಯವ ಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಎನ್ನುವಾತನನ್ನು ನಿನ್ನೆ( ಏಪ್ರಿಲ್ 18) ಮಂಗಳವಾರ ಕೆಲ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಪ್ರವೀಣ ಕಮ್ಮಾರ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮಂಗಳವಾರ ತಡರಾತ್ರಿ ಕೆಲವು ಕಾರಣಗಳಿಗೆ ಯುವಕರ ಮಧ್ಯೆ ಜಗಳ ಸಂಭವಿಸಿದ್ದು, ಈ ಜಗಳ ಪ್ರವೀಣ ಅವರ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದ ಪ್ರವೀಣ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರುವ ಗರಗ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಬಿಜೆಪಿ ಯುವ ಮುಖಂಡ ಹಾಗೂ ಕೋಟೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಹತ್ಯೆಯಾಗಿದೆ. ಪ್ರವೀಣ ಕಮ್ಮಾರ ಮೃತದೇಹ ಇರುವ ಎಸ್‌ಡಿಎಂ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅಮೃತ ದೇಸಾಯಿ ಅವರು ಭೇಟಿ ನೀಡಿದ್ದಾರೆ.
ರಾಜಕೀಯ ವಿಷಯವಾಗಿಯೇ ಈ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪ್ರವೀಣ ಕಮ್ಮಾರ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ. ನಿನ್ನೆ ತಾನೇ ಅಮೃತ ದೇಸಾಯಿ ಅವರ ನಾಮಪತ್ರ ಸಲ್ಲಿಕೆಯ ರ್‍ಯಾಲಿಯಲ್ಲೂ ಭಾಗಿಯಾಗಿದ್ದರು. ಆದರೆ, ಅದೇ ದಿನ ರಾತ್ರಿ ಕೋಟೂರಿನಲ್ಲಿ ನಡೆದ ಜಗಳದಲ್ಲಿ ದುಷ್ಕರ್ಮಿಗಳು ಪ್ರವೀಣ ಕಮ್ಮಾರನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಪ್ರವೀಣ ಕಮ್ಮಾರ ಬಿಜೆಪಿ ಮುಖಂಡರಾಗಿದ್ದು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಿಜೆಪಿ ಯುವ ಮುಖಂಡನ ಅಂತಿಮ ದರ್ಶನ ಪಡೆದರು.
ಇತ್ತ ಕೋಟೂರಿನಲ್ಲಿ ನೀರವ ಮೌನ ಆವರಿಸಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿಯೇ ಈ ಹತ್ಯೆ ನಡೆದಿದ್ದು, ಯಾವುದೇ ಗಲಾಟೆಗಳು ಉಂಟಾಗದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಹತ್ಯೆ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದ್ದು, ತಂಡವನ್ನು ಕೂಡ ರಚನೆ ಮಾಡಲಾಗಿದೆ.












Click it and Unblock the Notifications