ಸರ್ಕಾರ ಪಥನವಾಗುವ ಕನಸು ಕಾಣುತ್ತಿದೆ ಬಿಜೆಪಿ: ಸಿದ್ದರಾಮಯ್ಯ
ಹುಬ್ಬಳ್ಳಿ, ಆಗಸ್ಟ್ 29: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ಕನಸು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬಯಸುತ್ತಿರುವ ಬದಲಾವಣೆ ಆಗುವುದಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು.

'ಮತ್ತೆ ಮುಖ್ಯಮಂತ್ರಿ ಆಗುತ್ತೇನೆ' ಎಂಬ ತಮ್ಮ ಹೇಳಿಕೆಯ ಬಗ್ಗೆ ಮತ್ತೆ ಸ್ಪಷ್ಟೀಕರಣ ನೀಡಿದ ಸಿದ್ದರಾಮಯ್ಯ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ನಾನು ಮುಂದಿನ ಬಾರಿ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದೆ ಎಂದರು.
ಕೆಲವು ಕಾಂಗ್ರೆಸ್ಸಿಗರನ್ನು ಅಲಕ್ಷಿಸಲಾಗಿದೆ ಎಂಬ ಮಾತಿಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಮ್ಮ ಭಾಗೀಧಾರಿಕೆಯ ಸರ್ಕಾರವಿದೆ. ನಮ್ಮ ಪಕ್ಷದ ಶಾಸಕರು ಮಂತ್ರಿಗಳಾಗಿದ್ದಾರಿ ಹೀಗಿದ್ದಾಗ ಕಾಂಗ್ರೆಸ್ ಅನ್ನು ಅಲಕ್ಷಿಸಲಾಗಿದೆ ಎಂಬುದು ಒಪ್ಪತಕ್ಕುದಲ್ಲ ಎಂದರು.
ಜೆಡಿಎಸ್ ಪಕ್ಷವು ರಾಜ್ಯ ಉಸ್ತುವಾರಿ ವೇಣುಗೋಪಾಲ್‌ಗೆ ಪತ್ರ ಬರೆದಿದೆ ಎಂಬ ಸುದ್ದಿಯನ್ನು ನಿರಾಕರಿಸಿದ ಅವರು, ಜೆಡಿಎಸ್ ಪಕ್ಷವು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‌ಗೆ ಯಾವುದೇ ಪತ್ರ ಬರೆದಿಲ್ಲ ಎಂದರು.

ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಎಲ್ಲ ಯೋಜನೆಗಳಿಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಆ ಬಗ್ಗೆ ಅನುಮಾನ ಬೇಡ ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದರು.












Click it and Unblock the Notifications