ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಪರ ನಟ ಶಿವರಾಜ್‌ಕುಮಾರ್ ದಂಪತಿ ರೋಡ್ ಶೋ
ಹುಬ್ಬಳ್ಳಿ, ಮೇ, 06: ರಾಜ್ಯ ವಿಧಾನಸಭಾ ಚುನವಾಣೆ ಹಿನ್ನೆಲೆ ಈಗಾಗಲೇ ಸಿನಿ ಸ್ಟಾರ್‌ಗಳು ಹಲವೆಡೆ ರಾಜಕೀಯ ನಾಯಕರ ಪರ ಪ್ರಚಾರಕ್ಕೆ ಧುಮುಕ್ಕಿದ್ದಾರೆ. ಅದೇ ರೀತಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪರ ರೋಡ್ ಶೋ ಮಾಡಿ ಗಮನ ಸೆಳೆದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೆನ್ನಿಗೆ ನಿಂತು ಶಿವರಾಜ್‌ಕುಮಾರ್ ದಂಪತಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶೆಟ್ಟರ್ ಪರವಾಗಿ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜಕುಮಾರ್ ಅಬ್ಬರದ ಪ್ರಚಾರ ಮಾಡಿದರು.

ಶಿವಣ್ಣ ದಂಪತಿ ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪ, ಹನಮಪ್ಪ ದೇವಸ್ಥಾನದಿಂದ ರಾಮನಗರವರೆಗೆ ರೋಡ್ ಶೋ ಮಾಡಿದರು. ಈ ವೇಳೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗಿಯಾಗಿದ್ದರು.
ಅಲ್ಲದೆ ಡೊಳ್ಳು ಕುಣಿತದಿಂದ ಆರಂಭವಾರ ರೋಡ್ ಶೋ ಪ್ರೇಕ್ಷಕರ ಗಮನ ಸೆಳೆಯಿತು. ಅದರಲ್ಲೂ ಶಿವಣ್ಣನನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು.
ಸೋಮಣ್ಣ ಪರ ಕಿಚ್ಚನ ಮತಬೇಟೆ
ಚಿತ್ರನಟ ಸುದೀಪ್ ಶುಕ್ರವಾರ (ಮೇ 05) ಚಾಮರಾಜನಗರದ ನಾಲ್ಕು ಕ್ಷೇತ್ರಗಳಲ್ಲಿಯೂ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು.
ಮೈಸೂರಿನ ಮೂಲಕ ಮೊದಲಿಗೆ ಗುಂಡ್ಲುಪೇಟೆಗೆ ಆಗಮಿಸಿದ ನಟ ಕಿಚ್ಚ ಸುದೀಪ್ ಅವರನ್ನು ಸಹಸ್ರಾರು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. 15 ನಿಮಿಷ ರೋಡ್ ಶೋ ನಡೆಸಿದ ನಟ ಸುದೀಪ್, ಗೆದ್ದೇ ಗೆಲ್ಲೆವೆವು ಒಂದು ದಿನ- ಗೆಲ್ಲಲೇಬೇಕು ಒಳ್ಳೆತನ ಎಂದು ಮಾತು ಆರಂಭಿಸಿದರು. ನೆವರ್ ಗಿವ್ ಅಪ್ ರೀತಿ ಸತತವಾಗಿ ಸೋತರು ಗೆದ್ದ ನಿರಂಜನಕುಮಾರ್ ಅವರನ್ನು ಈ ಬಾರಿಯೂ ಗೆಲ್ಲಿಸಿಕೊಡಬೇಕು ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ಗುಂಡ್ಲುಪೇಟೆಯಲ್ಲಿ ನೆಚ್ಚಿನ ನಟನನ್ನು ಕಾಣಲು ಆಭಿಮಾನಿಗಳ ಸಮೂಹವೇ ನೆರೆದಿತ್ತು. ಈ ವೇಳೆ, ಪ್ರಚಾರ ವಾಹನ ಹತ್ತಿದ ಹೊಸೂರಿನ ಅಜಿತ್ ಕುಮಾರ್ ಎಂಬ ಅಭಿಮಾನಿ ಎದೆ ಮೇಲೆ ಸುದೀಪ್ ಆಟೋಗ್ರಾಫ್ ಹಾಕಿದರು. ಅಲ್ಲದೆ ಪುನೀತ್‌ರಾಜ್‌ಕುಮಾರ್ ಹಾಗೂ ಇನ್ನಿತರ ಅಭಿಮಾನಿಗಳು ತಂದಿದ್ದ ತಮ್ಮ ಫೋಟೋಗಳಿಗೆ ಹಸ್ತಾಕ್ಷಾರ ಹಾಕಿ ಗಮನ ಸೆಳೆದರು. ಹಾಗೆಯೆ ಕಿಚ್ಚ ಕಿಚ್ಚ ಎಂದು ಕೂಗುತ್ತಿದ್ದ ಅಭಿಮಾನಿಗೆ ತಮ್ಮ ವಾಟರ್ ಬಾಟೆಲ್ ಅನ್ನು ಉಡುಗೊರೆಯಾಗಿ ಎಸೆದರು.
ಗುಂಡ್ಲುಪೇಟೆ ಪ್ರಚಾರದ ಬಳಿಕ ಚಾಮರಾಜನಗರಕ್ಕೆ ಆಗಮಿಸಿದ ನಟ ಸುದೀಪ್, ಸಚಿವ ವಿ.ಸೋಮಣ್ಣ ಅವರ ಪರ ಪ್ರಚಾರ ನಡೆಸಿದರು. ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಲ್ಲಿ ಸುದೀಪ್ ಅವರನ್ನು 5 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳ ಜಮಾಯಿಸಿ ಸ್ವಾಗತಿಸಿದರು. ಇನ್ನು ಪ್ರಚಾರದ ವೇಳೆ ಕಾರಿನ ಮೇಲೆ ನಿಂತಿದ್ದ ಸೋಮಣ್ಣ ಆಯತಪ್ಪಿ ಬೀಳುತ್ತಿದ್ದಾಗ ಸುದೀಪ್ ಕೈ ಹಿಡಿದೆತ್ತಿ ಅವಘಡ ತಪ್ಪಿಸಿದ್ದರು.
ಅಭಿಮಾನಿಯೋರ್ವ ಕಾರನ್ನು ಹತ್ತಿ ಸುದೀಪ್ ಮುಟ್ಟಲು ಪ್ರಯತ್ನಿಸಿದಾಗ ಈ ಅವಘಡ ಉಂಟಾಯಿತು. ಚಾಮರಾಜನಗರದ ಬಳಿಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಯಳಂದೂರು ಮತ್ತು ಹನೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಕಿಚ್ಚ ಹೋದಲೆಲ್ಲಾ ಕ್ರೇನ್ ಮೂಲಕ ಸೇಬು, ಹೂವಿನ ಹಾರಗಳನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಮತ್ತೊಂದೆಡೆ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ಅವರನ್ನು ನಿಯಂತ್ರಣಿಸಲು ಪೊಲೀಸರು ಲಾಠಿ ರುಚಿ ತೋರಿಸಬೇಕಾಯಿತು.












Click it and Unblock the Notifications