ಬಂಧಿತ ದರ್ಶನ್‌ಗೆ ಸಾಮಾನ್ಯರಂತೆ ಟ್ರೀಟ್ಮೆಂಟ್ ಕೊಡಿ: ತಾರತಮ್ಯ ಮಾಡಬೇಡಿ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ, ಜೂನ್ 16: ಕರ್ನಾಟಕ ರಾಜ್ಯ ಸರ್ಕಾರದಿಂದ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸರ್ಕಾರ ಗ್ಯಾರೆಂಟಿಗಳನ್ನು ಉಚಿತವಾಗಿ ಕೊಡಲು ಇಂಧನ ದರ ಏರಿಕೆ ಮಾಡಿದೆ. ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಕಿಡಿ ಕಾರಿದರು. ಇದೇ ವೇಳೆ ಅವರು ಕೊಲೆ ಪ್ರಕರಣದ ಆರೋಪಿ ಬಂಧಿತ ನಟ ದರ್ಶನ್ ಬಗ್ಗೆಯೂ ಮಾತನಾಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಭಾನುವಾರ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ತನ್ನ ಖಜಾನೆಯಿಂದ ದುಡ್ಡು ಖರ್ಚು ಮಾಡುತ್ತಿದೆ. ಇದರಿಂದ ದಿನ ನಿತ್ಯದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಈ ಮಧ್ಯೆ ಬೆಲೆ ಏರಿಕೆ ಮೂಲಕ ಜನರಿಗೆ ಆರ್ಥಿಕವಾಗಿ ತೊಂದರೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಉಚಿತ ಯೋಜನೆಗಳನ್ನು ನೀಡುತ್ತಿರುವ ಹಾಗೂ ಸದ್ಯ ಇಂಧನ ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವ ರಾಜ್ಯ ಸರ್ಕಾರಕ್ಕೆ ಗ್ಯಾರೆಂಟಿಗಳನ್ನು ಯಾಕೆ ಮುಂದುವರೆಸುತ್ತೀರಿ ಎಂದು ಅಂತಾ ಅವರ ಶಾಸಕರೇ ಕೇಳುತ್ತಿದ್ದಾರೆ ಎಂದರು.
ಇಂಧನ ದರ ಏರಿಕೆ: ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ
ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡದೇ ಹೋದರೆ ಬಿಜೆಪಿಯಿಂದ ಉಗ್ರ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರು ಕೇಂದ್ರ ಸರ್ಕಾರ ದರ ಏರಿಕೆ ಮಾಡಿದಾಗ ಪ್ರತಿಭಟನೆ ಮಾಡಿದ್ದಾರೆ.
ಬೇರೆ ರಾಜ್ಯಗಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲೂ ಸಮಾನ ಬೆಲೆ ಇರಬೇಕು. ಇಲ್ಲವಾದರೆ ಇಲ್ಲಿಂದ ಬೇರೆ ಕಡೆ ಹೋಗಿ ಜನ ಪೆಟ್ರೋಲ್ ತರುತ್ತಾರೆ. ರಾಜ್ಯದ ಜನರಿಗೆ ಹೆಚ್ಚಿನ ಒತ್ತಡ ಹಾಕಿ ಅನ್ಯಾಯ ಮಾಡಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ನಿರ್ಧಾರವನ್ನು ಈಕೂಡಲೇಣ ವಾಪಸ್ ಪಡೆದುಕೊಳ್ಳಬೇಕೆಂದು ಅವರು ಆಗ್ರಹಿಸಿದರು.

ಅನುಭವಿ ಸಿಎಂ ಆಡಳಿತದಲ್ಲಿ ವಿಫಲ: ಶೆಟ್ಟರ್
ರಾಜ್ಯದಲ್ಲಿ ಇದೆ ಪರಿಸ್ಥಿತಿ ಮುಂದುವರೆದರೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಸಹ ಹಣವಿಲ್ಲದಂತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವ ವ್ಯಕ್ತಿ ಎಂದು ಹೇಳುತ್ತಾರೆ. ಇದೀಗ ಅವರೇ ಆಡಳಿತ ನಿರ್ವಹಣೆಯಲ್ಲಿ, ಜನಸಾಮಾನ್ಯ ಸಮಸ್ಯೆ ಆಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಮೇಲೆ ಸರ್ಕಾರದ ಷಡ್ಯಂತ್ರ
ಇನ್ನೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಷಡ್ಯಂತ್ರ ಮಾಡುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಯಡಿಯೂರಪ್ಪ ಅವರ ಮೇಲೆ ಪ್ರಕರಣ ದಾಖಲಾದಾಗ ಗೃಹ ಮಂತ್ರಿಗಳೇ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದಿದ್ದಾರೆ. ವಾಲ್ಮೀಕಿ ಹಗರಣ, ನಾಗೇಂದ್ರ ಅವರ ರಾಜೀನಾಮೆ ಮುಚ್ಚಿ ಹಾಕಲು ಇದನ್ನ ಮಾಡಿದೆ ರಾಜಕೀಯ ದ್ವೇಷ ಸಾಧಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಅವರು ವಿವರಿಸಿದರು.
ಹೈಕೋರ್ಟ್ ಯಾಕೆ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಬಂಧನ ಎಂದು ಎಸ್ಐಟಿ ಅಧಿಕಾರಿಗಳಿಗೇ ಪ್ರಶ್ನೆ ಮಾಡಿದೆ. ಎಂದು ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪ ಕುರಿತು ಪ್ರಶ್ನೆಗಳಿಗೆ ಶೆಟ್ಟರ್ ಉತ್ತರಿಸಿದರು.
ದರ್ಶನ್‌ಗೆ ಸಾಮಾನ್ಯ ಆರೋಪಿಗಳಂತೆ ಟ್ರೀಟ್ಮೆಂಟ್ ಕೊಡಿ
ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ದರ್ಶನ್ ಗೆ ರಾಜಮರ್ಯಾದೆ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ಕಾನೂನುನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು. ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲ ಮೆಸೇಜ್ ಗಾಗಿ ಕೊಲೆ ಯಾಕೆ ಮಾಡಬೇಕು? ಎಂದು ಪ್ರಶ್ನಿಸಿದರು. ಇಂತಹ ವಿಷಯಗಳಿಗೆ ಸೈಬರ್ ಕ್ರೈಮ್ ವಿಭಾಗ ಇದೆ. ಅಲ್ಲಿ ದೂರು ಕೊಡಬಹುದಿತ್ತು ಎಂದು ಅವರು ಹೇಳಿದರು.
ನಟನಿಗೂ-ಸಾಮಾನ್ಯರ ಮಧ್ಯೆ ತಾರತಮ್ಯ ಆಗಬಾರದು
ಒಬ್ಬ ಸಿನಿಮಾ ನಟ ಆ ವ್ಯಕ್ತಿಯನ್ನು ಕೊಲೆ ಮಾಡಬಾರದಿತ್ತು. ಆರೋಪಿಗೆ ಯಾವ ರೀತಿ ಪೊಲೀಸರು ಟ್ರೀಟ್ಮೆಂಟ್ ಕೊಡುತ್ತಾರೋ ಇಲ್ಲೂ ಹಾಗೆ ಕೊಡಬೇಕು. ನಟ ಆಗಲಿ ಸಾಮಾನ್ಯ ಜನರಾಗಲಿ ತಾರತಮ್ಯ ಆಗಬಾರದು ಎಂದು ತಿಳಿಸಿದರು.
24 ರಿಂದ ಪಾರ್ಲಿಮೆಂಟ್ ಅಧಿವೇಶನಕ್ಕೆ ಕರೆದಿದ್ದಾರೆ. 25, 26ರಂದು ಪ್ರಮಾಣ ವಚನ ಸ್ವೀಕರಿಸ ಬಹುದು.
ಲೋಕಸಭಾ ಚುನಾವಣೆ ದೊಡ್ಡ ಅಂತರದಿಂದ ಗೆದ್ದಿದ್ದೇನೆ. ನನಗೆ ಕೇಂದ್ರದ ಸಚಿವ ಸ್ಥಾನ ನೀಡುವುದು ಪ್ರಧಾನಮಂತ್ರಿಗಳು ಮತ್ತು ಪಕ್ಷದ ಆಯ್ಕೆಗೆ ಬಿಟ್ಟ ವಿಚಾರ. ನನಗೆ ಕೇಂದ್ರ ಮಂತ್ರಿ ಸ್ಥಾನ ತಪ್ಪಿದೆ ಎಂದು ನಾನ್ಯಾಕೆ ಹೇಳಲಿ ಎಂದು ಅವರು ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು.











Click it and Unblock the Notifications