ಪಿಯುಸಿ ಫಲಿತಾಂಶ; ಹುಬ್ಬಳ್ಳಿಯ ವಿದ್ಯಾರ್ಥಿನಿಗೆ 3ನೇ Rank
ಹುಬ್ಬಳ್ಳಿ, ಜೂನ್ 18: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ಬಂದಿದೆ.
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಬೆಳಗ್ಗೆ 11.30 ಫಲಿತಾಂಶ ಬಿಡುಗಡೆ ಮಾಡಿದೆ. ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ವಿದ್ಯಾರ್ಥಿನಿ ಸಾನಿಕಾ ರಾಜ್ಯಕ್ಕೆ 3ನೇ rank ಪಡೆದಿದ್ದಾರೆ. ಎಸ್. ಜೆ. ಎಂ. ವಿ. ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಎಸ್. ಜೆ. ಎಂ. ವಿ. ಎಸ್ ಕಾಲೇಜಿನ ವಿದ್ಯಾರ್ಥಿನಿ ಸಾನಿಕಾ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಲೇಜಿಗೆ ಆಗಮಿಸಿದರು. ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ವಿದ್ಯಾರ್ಥಿನಿಯನ್ನು ವಾದ್ಯಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕಾಲೇಜಿನ ಆವರಣದಲ್ಲಿ ಸಂಭ್ರಮ ಮನೆ ಮಾಡಿತ್ತು.

ಇನ್ನೂ 593 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ rank ಪಡೆದಿದ್ದು, ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕಾಲೇಜಿನಲ್ಲಿ ಉಪನ್ಯಾಸಕರು ಸಿಹಿ ತಿನ್ನಿಸಿ ಸಾನಿಕಾ ಸಾಧನೆಯನ್ನು ಕೊಂಡಾಡಿದರು. ಅಲ್ಲದೇ ಕಾಲೇಜಿನ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸಿದರು.
ಪಾಲಕರ ಸಹಕಾರ; ವಿದ್ಯಾರ್ಥಿನಿ ಸಾನಿಕಾ ಮಾತನಾಡಿ, "3ನೇ rank ನಿರೀಕ್ಷೆ ಮಾಡಿರಲಿಲ್ಲ, ರಿಸಲ್ಟ್ ತುಂಬಾ ಖುಷಿ ಕೊಟ್ಟಿದೆ. ಶಿಕ್ಷಕರು, ಪಾಲಕರ ಸಹಕಾರದಿಂದ ಸಾಧನೆ ಸಾಧ್ಯವಾಗಿದೆ. ಅಂಕಗಳಿಕೆ ವಿಚಾರದಲ್ಲಿ ಪೋಷಕರಿಂದ ಯಾವುದೇ ಒತ್ತಡವಿರಲಿಲ್ಲ. ಎಲ್ಲಾ ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆಯನ್ನು ಬರೆದರೆ ಉತ್ತಮ ಅಂಕ ಗಳಿಸಲು ಸಾಧ್ಯ" ಎಂದರು.

ಈ ವರ್ಷ ಒಟ್ಟು 6,83,563 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.












Click it and Unblock the Notifications